ಕೊಲ್ಹಾಪುರ: ಕೆಎಸ್‌ಆರ್‌ಟಿಸಿ ಬಸ್ ಮೇಲೆ ಮತ್ತೆ ಕಲ್ಲು ತೂರಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಈ ಘಟನೆ ನಡೆದಿದ್ದು,ಕರ್ನಾಟಕ ಸಾರಿಗೆ ಬಸ್‌ನ ಗಾಜು ಪುಡಿಪುಡಿಯಾಗಿದೆ.
ಇತ್ತೀಚಿಗೆ ಕನ್ನಡ ಮಾತಾಡು ಎಂದಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಪ್ರಕರಣದ ನಂತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಎರಡೂ ರಾಜ್ಯದ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ಹಾಗೂ ಡ್ರೈವರ್ ಮತ್ತು ಕಂಡಕ್ಟರ್‌ಗೆ ಮಸಿ ಬಳಿಯುವಂಥ ಘಟನೆಗಳು ನಡೆದಿದ್ದರಿಂದ ಎರಡು ರಾಜ್ಯಗಳ ನಡುವೆ ಸಂಚರಿಸುತ್ತಿದ್ದ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದ ಮೇಲೆ ಸಾರಿಗೆ ಸೇವೆ ಮರುಸ್ಥಾಪಿಸಲಾಗಿತ್ತು. ಆದರೆ ಇಂದು ಮತ್ತೆ ಮಹಾರಾಷ್ಟ್ರದಲ್ಲಿ ಪುಂಡರು ಬಾಲ ಬಿಚ್ಚಿದ್ದು, ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಮಹಾರಾಷ್ಟ್ರದ ಇಂಚಲಕರಂಜಿ ಬಳಿ ಕಲ್ಲು ತೂರಾಟ ನಡೆಸುತ್ತಿದ್ದಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ಬಸ್‌ನಿಂದ ಇಳಿದು ಚಲ್ಲಾಪಿಲ್ಲಿಯಾಗಿದ್ದಾರೆ. ಇದೀಗ ಘಟನೆಯ ಕುರಿತು ಇಚಲಕರಂಜಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.