Saturday, May 16, 2026
Homeಟಾಪ್ ನ್ಯೂಸ್ACTOR DARSHAN : ಸುಪ್ರೀಂ ಕೋರ್ಟ್ ನೋಟಿಸ್ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ 'ಸಾಕ್ಷ್ಯ' ಸಮೇತ ಕೌಂಟರ್!

ACTOR DARSHAN : ಸುಪ್ರೀಂ ಕೋರ್ಟ್ ನೋಟಿಸ್ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ‘ಸಾಕ್ಷ್ಯ’ ಸಮೇತ ಕೌಂಟರ್!

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ (Actor Darshan) ಅವರ ಜಾಮೀನು ಅರ್ಜಿಯ (Bail Plea) ವಿಚಾರಣೆ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಹೈಕೋರ್ಟ್‌ನಲ್ಲಿ ಜಾಮೀನು ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ದರ್ಶನ್ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ (State Govt) ನೋಟಿಸ್ ಜಾರಿ ಮಾಡಿದೆ.

ನೋಟಿಸ್‌ಗೆ ಉತ್ತರ ನೀಡಲು ಅಧಿಕಾರಿಗಳ ಸಿದ್ಧತೆ

ಜಾಮೀನು ಅರ್ಜಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೋಟಿಸ್ ನೀಡುತ್ತಿದ್ದಂತೆಯೇ ಇತ್ತ ಕಾರಾಗೃಹ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ದರ್ಶನ್ ಅವರು ತಮ್ಮ ಜಾಮೀನು ಅರ್ಜಿಯಲ್ಲಿ ಜೈಲಿನ ವ್ಯವಸ್ಥೆ ಹಾಗೂ ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯ ಸಮೇತ ಉತ್ತರ ನೀಡಲು ಇಲಾಖೆ ನಿರ್ಧರಿಸಿದೆ. ವಿಶೇಷವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವಾಗ ರಾಜ್ಯ ಸರ್ಕಾರಕ್ಕೆ ಬಲ ತುಂಬಲು ಕಾರಾಗೃಹ ಇಲಾಖೆಯು ದರ್ಶನ್ ಅವರ ನಡವಳಿಕೆ ಹಾಗೂ ಜೈಲಿನಲ್ಲಿ ನೀಡಲಾದ ಸೌಲಭ್ಯಗಳ ಬಗ್ಗೆ ಸವಿವರವಾದ ವರದಿಯನ್ನು ಸಿದ್ಧಪಡಿಸುತ್ತಿದೆ.

ದರ್ಶನ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದು, ಜಾಮೀನು ಪಡೆಯಲು ಪ್ರಬಲ ಕಾರಣಗಳನ್ನು ಮಂಡಿಸುತ್ತಿದ್ದಾರೆ. ಇದೇ ವೇಳೆ ಸುಪ್ರೀಂ ಕೋರ್ಟ್ 57ನೇ ಸಿ.ಸಿ.ಎಚ್ ನ್ಯಾಯಾಲಯಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದ್ದು, ಪ್ರಕರಣದ ಗಂಭೀರತೆಯನ್ನು ಗಮನಿಸುತ್ತಿದೆ. 

ಕಾರಾಗೃಹ ಇಲಾಖೆಯು ಅಧಿಕಾರಿಗಳ ವಿರುದ್ಧ ದರ್ಶನ್ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಸಾಬೀತುಪಡಿಸಲು ಮುಂದಾಗಿದೆ. ಒಂದು ವೇಳೆ ಇಲಾಖೆ ಸಲ್ಲಿಸುವ ವರದಿ ದರ್ಶನ್ ಅವರಿಗೆ ವ್ಯತಿರಿಕ್ತವಾದರೆ ಜಾಮೀನು ಸಿಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರದ ಉತ್ತರ ಮತ್ತು ಕಾರಾಗೃಹ ಇಲಾಖೆಯ ಸಾಕ್ಷ್ಯಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ನಟ ದರ್ಶನ್ ಆರೋಪಿಗಳೇನು?

ಜೈಲಿನಲ್ಲಿ ಮೂಲಸೌಕರ್ಯದ ಕೊರತೆ:

ದರ್ಶನ್ ಅವರಿಗೆ ಜೈಲಿನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ನೀಡುತ್ತಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿರುವುದು ಮಾನಸಿಕವಾಗಿ ಆಘಾತವನ್ನು ಉಂಟುಮಾಡುತ್ತಿದೆ. ದರ್ಶನ್ ಅವರಿಗೆ ಯಾವುದೇ ಐಷಾರಾಮಿ ಸೌಲಭ್ಯಗಳು ಬೇಕಿಲ್ಲ, ಆದರೆ ಇತರ ವಿಚಾರಣಾಧೀನ ಖೈದಿಗಳಿಗೆ ಸಿಗುವ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಬೇಕು ಎಂದು ಅವರು ಮನವಿ ಮಾಡಿದ್ದರು.

ಸಿನಿಮಾ ಪ್ರಾಜೆಕ್ಟ್‌ಗಳು ಮತ್ತು ಆರ್ಥಿಕ ನಷ್ಟ:

ದರ್ಶನ್ ಅವರು ಜೈಲಿನಲ್ಲಿ ಇರುವುದರಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗಾಗಲೇ ಸುಮಾರು 6 ಕೋಟಿ ರೂ. ಮೊತ್ತದ ಮೂರು ದೊಡ್ಡ ಸಿನಿಮಾ ಪ್ರಾಜೆಕ್ಟ್‌ಗಳು ಅವರ ಕೈತಪ್ಪಿವೆ. ದೀರ್ಘಕಾಲದ ಪ್ರತ್ಯೇಕ ವಾಸವು ಅವರ ವೃತ್ತಿಜೀವನ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಭದ್ರತೆಯ ಆತಂಕ:

ನಟ ದರ್ಶನ್ ಒಬ್ಬ ಜನಪ್ರಿಯ ವ್ಯಕ್ತಿಯಾಗಿರುವುದರಿಂದ ಜೈಲಿನಲ್ಲಿ ಅವರಿಗೆ ಭದ್ರತೆಯ ಭಯ ಎದುರಾಗಿದೆ. ಸಹಖೈದಿಗಳಿಂದ ನಿಂದನೆ ಮತ್ತು ಬೆದರಿಕೆಗಳು ಬರುತ್ತಿದ್ದು, ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಕೀಲರು ಆರೋಪಿಸಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!