Thursday, July 16, 2026
Homeಟಾಪ್ ನ್ಯೂಸ್SIR: ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ - ಡಿಸಿಎಂ ಡಾ. ಜಿ. ಪರಮೇಶ್ವರ್

SIR: ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ – ಡಿಸಿಎಂ ಡಾ. ಜಿ. ಪರಮೇಶ್ವರ್

ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ (SIR)  ಪ್ರಕ್ರಿಯೆಯು ಭಾರತೀಯ ಚುನಾವಣಾ ಆಯೋಗದ (ECI) ಮಾರ್ಗಸೂಚಿಗಳ ಅನ್ವಯವೇ ನಡೆಯುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಹಸ್ತಕ್ಷೇಪವಾಗಲಿ ಅಥವಾ ಪಾತ್ರವಾಗಲಿ ಇಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಗೊಂದಲ, ಬಿಎಲ್ಒಗಳ ಬೇಜವಾಬ್ದಾರಿತನ ಹಾಗೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ತಪ್ಪು ಮಾಡಿದರೆ ಆಯೋಗ ಕ್ರಮ ಕೈಗೊಳ್ಳಲಿ
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆ (Independent Body). ಅವರು ಕೇಳಿದ ಹಿನ್ನೆಲೆಯಲ್ಲಿ ಸರ್ಕಾರ ಕೇವಲ ಸಿಬ್ಬಂದಿಗಳನ್ನು ನಿಯೋಜಿಸಿಕೊಟ್ಟಿದೆಯೇ ಹೊರತು ಬೇರೇನೂ ಮಾಡಿಲ್ಲ. ನಾವು ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಸಿಬ್ಬಂದಿಗಾಗಲಿ ಹೀಗೆಯೇ ಮಾಡಿ ಎಂದು ಯಾವುದೇ ಸೂಚನೆ ಕೊಟ್ಟಿಲ್ಲ. ಒಂದು ವೇಳೆ ಎಲ್ಲಿಯಾದರೂ ನಿಯಮ ಮೀರಿ ಕೆಲಸ ನಡೆದಿದ್ದರೆ, ಅದರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದರು.

ಕೆಲವು ಕಡೆಗಳಲ್ಲಿ ಬಿಎಲ್ಒಗಳು (BLO – Booth Level Officers) ಕಚೇರಿ ಬಿಟ್ಟು ಎಲ್ಲೋ ಒಂದು ಕಡೆ ಕುಳಿತುಕೊಂಡು ಫಾರ್ಮ್‌ಗಳನ್ನು ಸ್ವೀಕರಿಸುತ್ತಿದ್ದಾರೆ ಎಂಬ ದೂರಿನ ಬಗ್ಗೆ ಮಾತನಾಡಿದ ಅವರು, ಫಾರ್ಮ್ ಕೊಟ್ಟು ತೆಗೆದುಕೊಳ್ಳುವ ಜವಾಬ್ದಾರಿ ಬಿಎಲ್ಒಗಳದ್ದಾಗಿರುತ್ತದೆ. ಅವರು ಎಲ್ಲೋ ಕುಳಿತು ತಪ್ಪು ಮಾಡುತ್ತಿದ್ದಾರೆ ಎನ್ನುವುದಾದರೆ ಅದು ಅವರ ವೈಯಕ್ತಿಕ ತಪ್ಪು. ಅಂತಹ ಘಟನೆಗಳು ನಡೆದಿದ್ದರೆ ತನಿಖೆ ನಡೆಸಿ ಕಠಿಣ ಕ್ರಮ ತಗೊಳ್ಳಲಿ. ಬಿಎಲ್ಒಗಳ ಮೇಲೆ ಕ್ರಮ ಜರುಗಿಸಲು ಆಯೋಗ ಮುಕ್ತವಾಗಿದೆ. ಮೊದಲು ಬಿಜೆಪಿ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ಏನಾಯಿತು ಎಂಬುದನ್ನು ಒಮ್ಮೆ ತಿರುಗಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಎಸ್ಐಆರ್ ಒಂದೇ ತಿಂಗಳಲ್ಲಿ ಮುಗಿಸಲು ಕೇಂದ್ರದ ಒತ್ತಡ
ಎಸ್ಐಆರ್ ಪ್ರಕ್ರಿಯೆಯನ್ನು ಕೇವಲ ಒಂದು ತಿಂಗಳೊಳಗೆ ಮುಗಿಸಲು ಸಿಬ್ಬಂದಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒತ್ತಡದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ರಾಜ್ಯ ಸರ್ಕಾರವನ್ನು ಕೇಳಿ ಆಯೋಗ ಈ ನಿಯಮಗಳನ್ನು ಮಾಡಿಲ್ಲ. ಕೇಂದ್ರ ಸರ್ಕಾರವೇ ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಸುವಂತೆ ಸಮಯ ನಿಗದಿಪಡಿಸಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಅದಕ್ಕೆ ರಾಜ್ಯ ಸರ್ಕಾರದಿಂದ ಕೊಡಬೇಕಾದ ಎಲ್ಲಾ ಸಹಕಾರವನ್ನು ನಾವು ನೀಡಿದ್ದೇವೆ. ಈ ಅವಧಿಯನ್ನು ಎರಡು ಅಥವಾ ಮೂರು ತಿಂಗಳಿಗೆ ವಿಸ್ತರಿಸಬೇಕೇ ಬೇಡವೇ ಎಂಬುದನ್ನು ಚುನಾವಣಾ ಆಯೋಗವೇ ನಿರ್ಧರಿಸಬೇಕು ಎಂದರು.

ಇದೇ ವೇಳೆ, ಹಲವು ಕಡೆಗಳಲ್ಲಿ ಮಸೀದಿ ಹಾಗೂ ಸಮುದಾಯ ಭವನಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿರುವ ಕುರಿತು ಕೇಳಿದಾಗ, ಚುನಾವಣಾ ಆಯೋಗವೇ ಆ ದೂರುಗಳನ್ನು ಪರಿಶೀಲಿಸಲಿ . ಅದರಲ್ಲಿ ನಮ್ಮದೇನೂ ಪಾತ್ರವಿಲ್ಲ ಮತ್ತು ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದು ನೇರವಾಗಿ ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಶೀಘ್ರ
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ವಿಳಂಬದ ಕುರಿತು ಮಾತನಾಡಿದ ಪರಮೇಶ್ವರ್, ಈ ಬಗ್ಗೆ ನಿನ್ನೆ ತಾನೇ ನಮ್ಮ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ನಾವು ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಪಂಚಾಯತಿಗಳವರೆಗೆ ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಬದ್ಧರಾಗಿದ್ದೇವೆ. ಯಾವಾಗ ನಡೆಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ದಿನಾಂಕ ತೀರ್ಮಾನ ಮಾಡುತ್ತೇವೆ ಎಂದರು.

೯೦೦ ಕೋಟಿ ವೆಚ್ಚದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಲ್ಲ!
ತುಮಕೂರು ಜಿಲ್ಲೆಯಲ್ಲಿ ರೈತರ ಪ್ರತಿಭಟನೆಗೆ ಕಾರಣವಾಗಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (ಕುಣಿಗಲ್-ಮಾಗಡಿ ಲಿಂಕ್ ಕೆನಾಲ್) ಕಾಮಗಾರಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು. ಈ ಯೋಜನೆಯ ಜಾರಿಗೆ ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. 900 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ಬಿಡುಗಡೆ ಮಾಡಿ, ಈಗಾಗಲೇ ಸಾಕಷ್ಟು ಪ್ರಮಾಣದ ಹಣವನ್ನು ಖರ್ಚು ಮಾಡಲಾಗಿದೆ. ಇಷ್ಟು ಪ್ರಗತಿಯಾಗಿರುವ ಯೋಜನೆಯನ್ನು ಈಗ ಅರ್ಧಕ್ಕೆ ನಿಲ್ಲಿಸಬೇಕು ಅಂದರೆ ಅದು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಯೋಜನೆಯಿಂದ ತುಮಕೂರು ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆತಂಕವನ್ನು ತಳ್ಳಿಹಾಕಿದ ಅವರು, ನಾವು ಯಾವುದೇ ಜಿಲ್ಲೆಯ ಹಿತಾಸಕ್ತಿಯನ್ನು ಬಲಿ ಕೊಟ್ಟಿಲ್ಲ. ಕುಣಿಗಲ್ ಇರುವುದು ಯಾವ ಜಿಲ್ಲೆಯಲ್ಲಿ? ನಮ್ಮದೇ ತುಮಕೂರು ಜಿಲ್ಲೆಯಲ್ಲಲ್ಲವೇ? ಹಾಗಾಗಿ ಅಲ್ಲಿಯೂ ಕೆಲಸ ಆಗುತ್ತದೆ, ಇಲ್ಲೂ ಆಗುತ್ತದೆ. ಇಲ್ಲಿಂದ ನೀರು ಲಿಂಕ್ ಕೆನಾಲ್ ಮೂಲಕ ಹೋಗುತ್ತದೆ ಎಂದ ತಕ್ಷಣ ಇಲ್ಲಿರುವ ತೆರೆದ ಕಾಲುವೆಯನ್ನೇನು ಮುಚ್ಚುವುದಿಲ್ಲವಲ್ಲ? ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.

ಇದನ್ನೂ ಓದಿ: ಸರ್ಕಾರಿ ಕರ್ತವ್ಯಕ್ಕೆ ತೆರಳಿದ್ದ ದಲಿತ ಸಮುದಾಯದ ಬಿಎಲ್‌ಒಗೆ ಜಾತಿ ನಿಂದನೆ – ಆರೋಪಿ ಮಹಿಳೆ ವಿರುದ್ಧ ಕೇಸ್ ದಾಖಲು!

ಹೆಚ್ಚಿನ ಸುದ್ದಿ

Change Language »
error: Content is protected !!