ಬಾಂಗ್ಲಾದೇಶ: ಇಲ್ಲಿನ ಮೆಹರ್‌ಪುರ ಪಟ್ಟಣದಲ್ಲಿ ಆಶ್ಚರ್ಯಕರ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನೆಟ್ಟಿಗರ ಗಮನ ಸೆಳೆದಿದೆ. ಗಾಯಗೊಂಡ ಕೋತಿಯೊಂದು ತನ್ನ ಅಗತ್ಯ ಆರೈಕೆಗಾಗಿ ಮೆಡಿಕಲ್ ಶಾಪ್ ಗೆ ನುಗ್ಗಿದೆ.ಆ ಪ್ರದೇಶದಲ್ಲಿನ ಅಲ್ಹೇರಾ ಫಾರ್ಮಸಿಯಲ್ಲಿ ಗಾಯಗೊಂಡ ಕೋತಿ ವೈದ್ಯಕೀಯ ನೆರವು ಪಡೆಯಲು ಬಂದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಾನರ ಕೌಂಟರ್‌ನಲ್ಲಿ ಶಾಂತವಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.ಈ ವೇಳೆ ಅಲ್ಲಿನ ಸಿಬ್ಬಂದಿ ಅದರ ಸಹಾಯಕ್ಕೆ ಧಾವಿಸಿದ್ದಾರೆ.ಒಬ್ಬ ವ್ಯಕ್ತಿ ಅದರ ಗಾಯಕ್ಕೆ ಮುಲಾಮು ಹಚ್ಚುವುದನ್ನು ಕೂಡ ಈ ವಿಡಿಯೋದಲ್ಲಿ ಗಮನಿಸಬಹುದು.
ಆ ನಂತರ ಇನ್ನೊಬ್ಬ ತನ್ನ ಕೈಗಳಿಂದ ಕೋತಿಯನ್ನು ಹಿಡಿದು ಗಾಯಗೊಂಡ ಭಾಗಕ್ಕೆ ಬ್ಯಾಂಡೇಜ್ ಸುತ್ತಿದ್ದಾನೆ. ಇಷ್ಟೆಲ್ಲಾ ನಡೆಯುವಾಗ ಏನೂ ಕಿರಿಕ್ ಮಾಡದೇ ಕೋತಿ ನಿಶ್ಚಲವಾಗಿ ಕುಳಿತು ಶುಶ್ರೂಷೆ ಮಾಡಿಸಿಕೊಂಡಿದೆ.ಈ ಘಟನೆಯ ವಿಡಿಯೋ ಕಂಡ ನೆಟ್ಟಿಗರು ಆ ಫಾರ್ಮಸಿ ಸಿಬ್ಬಂದಿಯ ದಯೆ ಮತ್ತು ತಾಳ್ಮೆಯನ್ನು ಶ್ಲಾಘಿಸಿದ್ದಾರೆ.ಈ ಅಸಾಧಾರಣ ಕ್ಷಣ ಮೆಹರ್‌ಪುರ ಸ್ಥಳೀಯರು ಮತ್ತು ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿದೆ.