ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನ ಕನ್ನಡ ಪರೀಕ್ಷೆಯ ವೇಳೆ, ಶಾಲಾ ಕಟ್ಟಡವನ್ನು ಹತ್ತಿ ಕಿಟಕಿಯ ಮೂಲಕ ನಕಲು ಚೀಟಿ ಹಂಚಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಮಕೂರಿನ ಪಾವಗಡದ ಖಾಸಗಿ ಶಾಲೆಯೊಂದರ ದೃಶ್ಯಾವಳಿಯಿದು ಎನ್ನಲಾಗಿದೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಅಶ್ವತ್ಥ್ ನಾರಾಯಣ್ ಅವರಿಗೆ ದೂರನ್ನೂ ಸಹ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣಾಧಿಕಾರಿಗಳು, ಇದು ಸ್ಥಳೀಯ ಅಧಿಕಾರಿಗಳ ಕರ್ತವ್ಯಲೋಪವೆಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಶುಕ್ರವಾರ ನಡೆದ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಒಂದೂ ಪರೀಕ್ಷಾ ಅಕ್ರಮವು ವರದಿಯಾಗಿಲ್ಲ ಎಂದು ಪರೀಕ್ಷಾ ಮಂಡಳಿ ಹೇಳಿಕೊಂಡಿತ್ತು. ಆದರೆ ನಕಲಿ ಅಭ್ಯರ್ಥಿಯನ್ನು ಪರೀಕ್ಷೆಗೆ ಕೂರಿಸುವುದು ಹಾಗೂ ನಕಲಿ ಚೀಟಿ ಹಾವಳಿಗಳು ಒಂದೊಂದಾಗಿ ಹೊರಬೀಳುತ್ತಿದೆ.