ಚಿಕ್ಕಮಗಳೂರು: ಚುನಾವಣಾ ಖರ್ಚಿಗೆ ಹಣ ನೀಡಿ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿರುವ ಘಟನೆ ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದಲ್ಲಿ ನಡೆದಿದೆ. ಟಿಕೆಟ್ ವಂಚಿತ ಕಾಂಗ್ರೆಸ್ ಅಭ್ಯರ್ಥಿ ಇಲಿಯಾಸ್ ಗೋರಿಗಂಡಿ ಗ್ರಾಮದಲ್ಲಿ ದೇಣಿಗೆ ಸಂಗ್ರಹಣೆಯ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಶಾಸಕ ಟಿ.ಡಿ.ರಾಜೇಗೌಡರ ಅಧಿಕಾರಾವಧಿಯಲ್ಲಿ ಕ್ಷೇತ್ರ ಕೊಂಚವೂ ಅಭಿವೃದ್ಧಿ ಕಂಡಿಲ್ಲ. ಆದರೂ ಸಹ ಮತ್ತೆ ಶಾಸಕ ಸ್ಥಾನಕ್ಕೆ ರಾಜೇಗೌಡರು ಸ್ಪರ್ಧಿಸುತ್ತಿದ್ದು, ಈ ಬಾರಿ ಶೃಂಗೇರಿಯಲ್ಲಿ ಪಕ್ಷ ನೆಲಕಚ್ಚುವುದು ಖಚಿತ ಎಂಬುದು ಇಲಿಯಾಸ್ ಅಭಿಪ್ರಾಯವಾಗಿದೆ. ಶಾಸಕರು ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪವೂ ಶೃಂಗೇರಿ ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬಂದಿದ್ದು, ಚುನಾವಣಾ ಸಮಯದಲ್ಲಿ ಪಕ್ಷದ ಒಳಜಗಳ ನಾಯಕರಿಗೆ ಇರಿಸುಮುರಿಸುಂಟುಮಾಡಿದೆ.
ದೇಣಿಗೆ ಸಂಗ್ರಹದ ಮೂಲಕ ಬಂಡಾಯದ ಸಂದೇಶ ಸಾರಿರುವ ಇಲಿಯಾಸ್, ಟಿ.ಡಿ. ರಾಜೇಗೌಡರ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆಯೂ ಸಹ ಇದೆಯೆನ್ನಲಾಗಿದೆ. ಈ ಕುರಿತು ಇಲಿಯಾಸ್ ಇದುವರೆಗೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ