ಪ್ರಸಿದ್ಥ ಹಿಂದೂ ಧಾರ್ಮಿಕ ಕ್ಷೇತ್ರವಾದ ತಿರುಪತಿಯಲ್ಲಿ ಇಂದು ಯುಗಾದಿ ಪ್ರಯುಕ್ತ ದೇವಾಲಯ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಾಗಿದೆ. ಪ್ರತಿದಿನಗಳಿಗಿಂತ ಇಂದು ದೇಗುಲದಲ್ಲಿ ನಡೆಯುವ ಕಾರ್ಯಕ್ರಮಗಳು ವಿಭಿನ್ನವಾಗಿ ವಿಶಿಷ್ಟವಾಗಿ ಇರಲಿವೆ.
ಯುಗಾದಿ, ಬ್ರಹ್ಮೋತ್ಸವ ಹಾಗೂ ವೈಕುಂಠ ಏಕಾದಶಿಗೂ ಮುನ್ನ ಈ ರೀತಿಯ ಸಂಪ್ರದಾಯ ತಿರುಪತಿಯಲ್ಲಿ ಚಾಲ್ತಿಯಲ್ಲಿದೆ. ಮುಂಜಾನೆ ಆರರಿಂದ ಹನ್ನೊಂದರವರೆಗೆ ದೇಗುಲವನ್ನು ಭಕ್ತರ ಭೇಟಿಗೆ ಸಂಪೂರ್ಣ ನಿರ್ಬಂಧಪಡಿಸಲಾಗಿದ್ದು, ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ದೇವಸ್ಥಾನದ ಹೊರ ಆವರಣವನ್ನು ನಿಗದಿತ ಸಿಬ್ಬಂದಿಗಳು ಶುಚಿಗೊಳಿಸಿದರೆ, ಗರ್ಭಗುಡಿಯನ್ನು ಅರ್ಚಕರು ಸ್ವಚ್ಛಗೊಳಿಸುತ್ತಾರೆ.
ಸ್ವಚ್ಛತೆಯ ವೇಳೆ ದೇವತಾ ವಿಗ್ರಹಕ್ಕೆ ನೂತನ ವಸ್ತ್ರವನ್ನು ಹೊದಿಸಲಾಗುತ್ತದೆ. ಸಂಪೂರ್ಣ ಸ್ವಚ್ಛತೆ ಮುಗಿದ ಬಳಿಕ ಇಡೀ ದೇಗುಲವನ್ನು ಕಲಶ ಜಲ, ಸುಗಂಧ ದ್ರವ್ಯಗಳಿಂದ ಸಂಪ್ರೋಕ್ಷಣಗೊಳಿಸಲಾಗುತ್ತದೆ. ಬಳಿಕ ದೇವರಿಗೆ ಹೊದೆಸಿದ್ದ ಬಟ್ಟೆ ತೆಗೆದು ಅಭಿಷೇಕ, ಪೂಜೆ, ನೈವೇದ್ಯ ನಡೆಸಿದ ಬಳಿಕ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಯುಗಾದಿ ಆಸ್ಥಾನ ಎಂದು ಕರೆಯಲ್ಪಡುವ ವಿಶೇಷ ಕಾರ್ಯಕ್ರಮ ನಡೆಯುವ ಇಂದು ವಿಐಪಿ ದರ್ಶನವನ್ನು ರದ್ದುಪಡಿಸಲಾಗಿರುತ್ತದೆ.