ಪ್ರತಿದಿನದ ಒಂದೇ ರೀತಿಯ ಉಪಾಹಾರ (Breakfast Recipe) ತಿಂದು ಬೇಸತ್ತಿರುವವರಿಗೆ ಶ್ಯಾವಿಗೆ ಇಡ್ಲಿ (Semiya Idli) ಒಂದು ಉತ್ತಮ ಆಯ್ಕೆಯಾಗಿದೆ. ಸಾಂಪ್ರದಾಯಿಕ ಇಡ್ಲಿ ತಯಾರಿಕೆಗೆ ಅಕ್ಕಿ ಮತ್ತು ಬೇಳೆಯನ್ನು ನೆನೆಸಿ, ರುಬ್ಬಿ, ಹುದುಗು ಬರಿಸಲು ದೀರ್ಘ ಸಮಯ ಬೇಕಾಗುತ್ತದೆ. ಆದರೆ ಈ ಶ್ಯಾವಿಗೆ ಇಡ್ಲಿಯನ್ನು ಯಾವುದೇ ತಯಾರಿ ಇಲ್ಲದಿದ್ದರೂ ತಕ್ಷಣವೇ ತಯಾರಿಸಬಹುದು. ರವೆ ಮತ್ತು ಶ್ಯಾವಿಗೆಯ ಸಂಯೋಜನೆಯಿಂದ ಮಾಡುವ ಈ ತಿಂಡಿ ನೋಡಲು ಆಕರ್ಷಕವಾಗಿರುವುದಲ್ಲದೆ, ಆರೋಗ್ಯಕ್ಕೂ ಪೂರಕವಾಗಿದೆ.
ಬೇಕಾಗುವ ಪದಾರ್ಥಗಳು:
* ಬಾಂಬೆ ರವೆ – 1 ಕಪ್
* ಶ್ಯಾವಿಗೆ- ಅರ್ಧ ಕಪ್
* ಹುಳಿ ಮೊಸರು- 1 ಕಪ್
* ಉಪ್ಪು- ರುಚಿಗೆ ತಕ್ಕಷ್ಟು
* ಸಾಸಿವೆ- ಅರ್ಧ ಟೀಸ್ಪೂನ್
* ಉದ್ದಿನಬೇಳೆ- ಅರ್ಧ ಟೀಸ್ಪೂನ್
* ಕಡಲೆಬೇಳೆ- ಅರ್ಧ ಟೀಸ್ಪೂನ್
* ಹಸಿರು ಮೆಣಸಿನಕಾಯಿ -2
* ತುರಿದ ಶುಂಠಿ – ಒಂದು ಇಂಚು
* ಕರಿಬೇವು – ಕೆಲವು
* ಅರಿಶಿನ – 1 ಚಿಟಿಕೆ
* ಹೆಚ್ಚಿದ ಕೊತ್ತಂಬರಿ ಸೊಪ್ಪು- 1 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಬಾಂಬೆ ರವೆಯನ್ನು ಸಣ್ಣ ಉರಿಯಲ್ಲಿ ಘಮ ಬರುವವರೆಗೆ ಹುರಿದು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು.
* ನಂತರ ಶ್ಯಾವಿಗೆಯನ್ನು ಸ್ವಲ್ಪ ಎಣ್ಣೆ ಹಾಕಿ ಕೆಂಪು ಬಣ್ಣ ಬರುವವರೆಗೆ ಹುರಿಯಬೇಕು.
* ಒಂದು ದೊಡ್ಡ ಪಾತ್ರೆಯಲ್ಲಿ ಹುರಿದ ರವೆ, ಶ್ಯಾವಿಗೆ ಮತ್ತು ಹುಳಿ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ.
* ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತರಬೇಕು.
* ರವೆಯು ತೇವಾಂಶವನ್ನು ಹೀರಿಕೊಳ್ಳಲು ಈ ಮಿಶ್ರಣವನ್ನು ಕನಿಷ್ಠ 20 ನಿಮಿಷಗಳ ಕಾಲ ನೆನೆಯಲು ಬಿಡಿ.
* ಈ ನಡುವೆ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಚಿಟಿಕೆ ಅರಿಶಿನ ಬಳಸಿ ಒಗ್ಗರಣೆ ಸಿದ್ಧಪಡಿಸಿ ಹಿಟ್ಟಿಗೆ ಸೇರಿಸಿ.
* ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
* ಈಗ ಇಡ್ಲಿ ಪಾತ್ರೆಯಲ್ಲಿ ನೀರು ಕಾಯಲು ಇಟ್ಟು, ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ ಸಿದ್ಧಪಡಿಸಿಕೊಳ್ಳಿ.
* ಇಡ್ಲಿಗಳನ್ನು ಬೇಯಿಸಲು ಇಡುವ ಮೊದಲು ಒಂದು ಚಿಟಿಕೆ ಅಡಿಗೆ ಸೋಡಾ ಅಥವಾ ಈನೋ ಸೇರಿಸಿ ಮಿಶ್ರಣ ಮಾಡಿ.
* ಪ್ರತಿ ಇಡ್ಲಿ ಅಚ್ಚಿನ ಮಧ್ಯದಲ್ಲಿ ಒಂದು ಗೋಡಂಬಿ ಇಟ್ಟು ಅದರ ಮೇಲೆ ಹಿಟ್ಟನ್ನು ಸುರಿದು, ಸುಮಾರು 8 ರಿಂದ 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಬಿಸಿಬಿಸಿಯಾದ ಶ್ಯಾವಿಗೆ ಇಡ್ಲಿ ಸಿದ್ಧವಾಗುತ್ತದೆ.
* ಈ ದಿಡೀರ್ ಶ್ಯಾವಿಗೆ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.
ಇದನ್ನೂ ಓದಿ : ಬೆಳಗಿನ ಉಪಹಾರಕ್ಕೆ ಪೌಷ್ಟಿಕಾಂಶಭರಿತ ಮೆಂತ್ಯ ಸೊಪ್ಪಿನ ಅಕ್ಕಿ ರೊಟ್ಟಿ