ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳು, ಬಾಹ್ಯಾಕಾಶಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ಕರೆತರಲು ಕ್ರೂ-10 ಕಾರ್ಯಾಚರಣೆಯನ್ನು ಶುಕ್ರವಾರ ಸಂಜೆ 7:03ಕ್ಕೆ (ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 4:30) ಆರಂಭಿಸಲು ಉದ್ದೇಶಿಸಿವೆ.
ಈ ಹಿಂದೆ ಕೇವಲ 24 ಗಂಟೆಗಳ ಮೊದಲು ಇದೇ ಕಾರ್ಯಾಚರಣೆಯನ್ನು ಸ್ಪೇಸ್‌ಎಕ್ಸ್ ರದ್ದುಗೊಳಿಸಿತ್ತು. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಕರೆತರುವ ಕ್ರೂ-10 ಕಾರ್ಯಾಚರಣೆಯನ್ನು ಮೊದಲು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಕೊನೆ ಗಳಿಗೆಯಲ್ಲಿ ರದ್ದುಗೊಳಿಸಲಾಯಿತು.
ಬೋಯಿಂಗ್‌ನ ಸ್ಟಾರ್‌ಲೈನರ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಭತ್ತು ತಿಂಗಳುಗಳ ಕಾಲ ಸಿಲುಕಿಕೊಂಡಿದ್ದರು. ಈ ಅನಿರೀಕ್ಷಿತ ವಿಳಂಬದಿಂದಾಗಿ ಅವರ ವಾಸ್ತವ್ಯ ಅವಧಿ ಗಣನೀಯವಾಗಿ ವಿಸ್ತರಿಸಲ್ಪಟ್ಟಿತು.
ಕ್ರೂ-10 ಕಾರ್ಯಾಚರಣೆ ಯಶಸ್ವಿಯಾದರೆ, ವಿಲಿಯಮ್ಸ್ ಮತ್ತು ವಿಲ್ಮೋರ್ ಮಾರ್ಚ್ 20ರ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಲಿದ್ದಾರೆ.