ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ (BCCI) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ (West Bengal) ಸರ್ಕಾರ ಕಡಿತಗೊಳಿಸಿದೆ. ಈ ಹಿಂದೆ ಅವರಿಗೆ ನೀಡಲಾಗಿದ್ದ ‘ಜೆಡ್’ ಶ್ರೇಣಿಯ ಭದ್ರತೆಯನ್ನು ಈಗ ‘ವೈ’ ಶ್ರೇಣಿಗೆ ಇಳಿಸಲಾಗಿದೆ.
ರಾಜ್ಯದ ಭದ್ರತಾ ವಿಭಾಗವು ಇತ್ತೀಚೆಗೆ ನಡೆಸಿದ ಉನ್ನತ ಮಟ್ಟದ ಪರಿಶೀಲನೆ ಮತ್ತು ಗಂಡಾಂತರದ ಮುನ್ಸೂಚನೆಗಳ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಗಂಗೂಲಿ ಅವರಿಗೆ 2023 ರಲ್ಲಿ ಭದ್ರತೆಯನ್ನು ಹೆಚ್ಚಿಸಿ ‘ಜೆಡ್’ ಶ್ರೇಣಿಯ ರಕ್ಷಣೆಯನ್ನು ನೀಡಲಾಗಿತ್ತು. ಈ ವ್ಯವಸ್ಥೆಯಡಿಯಲ್ಲಿ ಅವರ ಕೋಲ್ಕತ್ತಾದ ಬೆಹಾಲಾ ನಿವಾಸಕ್ಕೆ ಕಾವಲುಗಾರರನ್ನು ನೇಮಿಸಲಾಗಿತ್ತು ಮತ್ತು ಅವರು ರಾಜ್ಯದೊಳಗೆ ಪ್ರಯಾಣಿಸುವಾಗ ಸಶಸ್ತ್ರ ಅಂಗರಕ್ಷಕರು ಜೊತೆಗಿರುತ್ತಿದ್ದರು. ಅಲ್ಲದೆ ಒಟ್ಟು 8 ರಿಂದ 10 ಪೊಲೀಸ್ ಸಿಬ್ಬಂದಿ ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದರು.
ಆದರೆ ಈಗಿನ ಹೊಸ ನಿಯಮದ ಪ್ರಕಾರ ಈ ವಿಶೇಷ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಈಗ ಅವರಿಗೆ ಸಿಗಲಿರುವ ‘ವೈ’ ಶ್ರೇಣಿಯ ಭದ್ರತೆಯಲ್ಲಿ ಕೇವಲ ಮೂರು ವಿಶೇಷ ಪೊಲೀಸ್ ಸಿಬ್ಬಂದಿ ಅವರ ಜೊತೆಗಿರಲಿದ್ದಾರೆ ಮತ್ತು ಅಷ್ಟೇ ಸಂಖ್ಯೆಯ ಪೊಲೀಸರು ಅವರ ಮನೆಗೆ ಕಾವಲಿರಲಿದ್ದಾರೆ.
ಇದನ್ನೂ ಓದಿ : ಈ ದೇಶದಲ್ಲಿ ಇರಬೇಕು ಅಂದರೆ ವಂದೇ ಮಾತರಂ ಹಾಡಲೇ ಬೇಕು – ಮುಸ್ಲಿಮರಿಗೆ ಸುವೇಂದು ಅಧಿಕಾರಿ ವಾರ್ನಿಂಗ್!