ರಾಂಚಿ: ಶಾಲಾ ಹಾಸ್ಟೆಲ್ ಕೊಠಡಿಯೊಳಗೆ ನುಗ್ಗಿದ ವಿಷಪೂರಿತ ಹಾವೊಂದು(Snake) ನಿದ್ದೆಯಲ್ಲಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ ಕಚ್ಚಿದ ಪರಿಣಾಮ, 13 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿ, ಮೂವರು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವ ಘೋರ ದುರಂತ ಜಾರ್ಖಂಡ್‌ನ(Jharkhand) ಲೋಹರ್ದಗಾ(Lohardaga) ಜಿಲ್ಲೆಯಲ್ಲಿ ಸಂಭವಿಸಿದೆ.
ಇಲ್ಲಿನ ರೋಚೋ ಮಹುವಾತೋಲಿಯಲ್ಲಿರುವ ಸಾನ್ವಸಿರಾ ಹೈಯರ್ ಸೆಕೆಂಡರಿ ವಸತಿ ಶಾಲೆಯ (ಖಾಸಗಿ ಶಾಲೆ) ಗರ್ಲ್ಸ್ ಹಾಸ್ಟೆಲ್‌ನಲ್ಲಿ ಮಂಗಳವಾರ ತಡರಾತ್ರಿ ಈ ಆಘಾತಕಾರಿ ಘಟನೆ ನಡೆದಿದೆ.
ನಿದ್ದೆಯಲ್ಲಿದ್ದಾಗ ನುಗ್ಗಿದ ಮೃತ್ಯು
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಹಾಸ್ಟೆಲ್‌ನ ವಿದ್ಯಾರ್ಥಿನಿಯರು ರಾತ್ರಿ ಊಟ ಮುಗಿಸಿ ಮಲಗಿದ್ದರು. ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೊಠಡಿಯೊಳಗೆ ನುಗ್ಗಿದ ವಿಷಪೂರಿತ ಹಾವು ಮೊದಲು ವರ್ಷಾ ಓರಾನ್ ಎಂಬ ಬಾಲಕಿಗೆ ಕಚ್ಚಿದೆ. ಆಕೆ ಜೋರಾಗಿ ಕಿರುಚಿಕೊಂಡಿದ್ದರಿಂದ ಕೊಠಡಿಯಲ್ಲಿದ್ದ ಉಳಿದ ಹುಡುಗಿಯರು ಎಚ್ಚರಗೊಂಡಿದ್ದಾರೆ. ಆದರೆ, ಉಳಿದವರು ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲೇ ಆ ಕ್ರೂರ ಹಾವು ಅನಿಶಾ ಓರಾನ್, ಮನಿಷಾ ಕುಮಾರಿ ಮತ್ತು ಫುಲ್ಮಾನಿಯಾ ಓರಾನ್ ಅವರಿಗೂ ಕಚ್ಚಿದೆ.
ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಪ್ರಾಣಪಕ್ಷಿ ಹಾರಿತು
ಹುಡುಗಿಯರ ಕಿರುಚಾಟ ಕೇಳಿ ತಕ್ಷಣವೇ ಧಾವಿಸಿದ ಶಾಲೆಯ ಶಿಕ್ಷಕರು, ನಾಲ್ವರೂ ವಿದ್ಯಾರ್ಥಿನಿಯರನ್ನು ತಡರಾತ್ರಿಯೇ ಲೋಹರ್ದಗಾ ಸದರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ವರ್ಷಾ ಓರಾನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಉಳಿದ ಮೂವರಲ್ಲಿ ಫುಲ್ಮಾನಿಯಾ ಎಂಬಾಕೆಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರು ವಿದ್ಯಾರ್ಥಿನಿಯರು ಲೋಹರ್ದಗಾ ಸದರ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವಸತಿ ಶಾಲೆಯಲ್ಲೇ ನಡೆದ ಈ ದುರಂತ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇದನ್ನೂ ಓದಿ : ವಯನಾಡು ಭೂಕುಸಿತ; ಹಲವರ ಜೀವ ಉಳಿಸಿದ ರಾಮನಗರದ ನೀರಿನ ಟ್ಯಾಂಕರ್..!