ಉತ್ತರಪ್ರದೇಶ: ಅಯೋಧ್ಯೆಯ (Ayodhya) ಪ್ರಸಿದ್ಧ ರಾಮಮಂದಿರದಲ್ಲಿ (Ram mandir) ಭಕ್ತರು ಸಮರ್ಪಿಸುತ್ತಿದ್ದ ಕಾಣಿಕೆ ಹಣವನ್ನು ದೀರ್ಘಕಾಲದಿಂದ ವ್ಯವಸ್ಥಿತವಾಗಿ ಕಳ್ಳತನ ಮಾಡುತ್ತಿರುವುದು ವಿಶೇಷ ತನಿಖಾ ತಂಡದ (SIT) ವಿಚಾರಣೆಯಿಂದ ದೃಢಪಟ್ಟಿದೆ. ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಈ ಆಘಾತಕಾರಿ ಸತ್ಯಾಂಶ ಹೊರಬಿದ್ದಿದೆ. ಹಗರಣ ಬೆಳಕಿಗೆ ಬರುವ ಮುನ್ನ ಮಂದಿರದ ಖಾತೆಗೆ ನಿತ್ಯ ಸರಾಸರಿ ಹದಿನಾರು ಲಕ್ಷದಿಂದ ಹದಿನೆಂಟು ಲಕ್ಷ ರೂಪಾಯಿ ಮಾತ್ರ ಜಮೆಯಾಗುತ್ತಿತ್ತು. ಆದರೆ ತನಿಖೆ ಆರಂಭವಾದ ನಂತರ ಈ ಮೊತ್ತವು ದಿನಕ್ಕೆ ಇಪ್ಪತ್ನಾಲ್ಕು ಲಕ್ಷದಿಂದ ಇಪ್ಪತ್ತಾರು ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಈ ವ್ಯತ್ಯಾಸವನ್ನು ಗಮನಿಸಿದರೆ ಪ್ರತಿದಿನ ಸುಮಾರು ಆರರಿಂದ ಎಂಟು ಲಕ್ಷ ರೂಪಾಯಿ ಲೂಟಿಯಾಗುತ್ತಿತ್ತು ಎಂಬುದು ಸ್ಪಷ್ಟವಾಗಿದೆ.
ಈ ಬೃಹತ್ ಚಂದಾಚೋರಿ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಮಮಂದಿರ ಟ್ರಸ್ಟ್, ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿಗೆ ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇನ್ನುಮುಂದೆ ಹಣ ಎಣಿಸುವ ಸಿಬ್ಬಂದಿಗಳು ಜೇಬುಗಳಿಲ್ಲದ ವಿಶೇಷ ನೀಲಿ ಬಣ್ಣದ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಎರಡು ಹಂತದ ತಪಾಸಣೆಗೆ ಒಳಗಾಗಬೇಕು. ಇದರೊಂದಿಗೆ ಕುರ್ಚಿಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ನೆಲದ ಮೇಲೆಯೇ ಕುಳಿತು ಹಣವನ್ನು ಎಣಿಸಬೇಕು ಹಾಗೂ ಎಣಿಕೆ ಸ್ಥಳದೊಳಗೆ ಪಾದರಕ್ಷೆಗಳನ್ನು ಧರಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ : ರಾಮಮಂದಿರಕ್ಕೆ ನಾನು ಕೊಟ್ಟ ₹1.11 ಲಕ್ಷ ಕಾಣಿಕೆ ವಾಪಸ್ ಕೊಡಿ ಎಂದ ದಿಗ್ವಿಜಯ್ ಸಿಂಗ್!
ಮತ್ತೊಂದೆಡೆ ಈ ಸಮಗ್ರ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸುವಂತೆ ಮತ್ತು ಸಿಎಜಿ ಮೂಲಕ ಲೆಕ್ಕ ಪರಿಶೋಧನೆ ನಡೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ನ್ಯಾಯಾಲಯ ಇದರ ವಿಚಾರಣೆ ನಡೆಸಲಿದೆ. ಅಯೋಧ್ಯೆಯ ಈ ಘಟನೆಯ ಬೆನ್ನಲ್ಲೇ ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಲ್ಲೂ ಕಾಣಿಕೆ ದುರುಪಯೋಗದ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವುದರಿಂದ, ಅಲ್ಲಿನ ಮಂಡಳಿ ಅಧ್ಯಕ್ಷರು ಸಮಗ್ರ ತನಿಖೆಗೆ ಆದೇಶಿಸಿದ್ದು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಲು ಸೂಚಿಸಿದ್ದಾರೆ.