ಚುನಾವಣಾ ಪ್ರಚಾರದ ನಿಮಿತ್ತ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಮೋದಿಗೆ ದಾವಣಗೆರೆಯಲ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಲಾಗುತ್ತಿದೆ. ಪ್ರಧಾನಿಯವರಿಗೆಂದೇ ಪುಣೆಯಲ್ಲಿ ತಯಾರಿಸಿ ತರಿಸಲಾಗಿರುವ ಚಿನ್ನದ ಲೇಪನವಿರುವ ಬೆಳ್ಳಿಯ ಇಟ್ಟಿಗೆಯೇ ಆ ಉಡುಗೊರೆ. 1990 ರಲ್ಲಿ ರಾಮಜನ್ಮ ಭೂಮಿ- ಬಾಬರಿ ಮಸೀದಿ ಗಲಭೆ ನಡೆದಿತ್ತು. ಆ ವೇಳೆ ರಾಮಜ್ಯೋತಿ ಯಾತ್ರೆ ನಡೆಸುತ್ತಿದ್ದ ಹಿಂದೂಪರ ಸಂಘಟನೆಗಳ ಮೇಲೆ ಗೋಲಿಬಾರ್ ನಡೆದು, ಎಂಟು ಮಂದಿ ಸಾವನ್ನಪ್ಪಿದ್ದರು. ಆ ಎಂಟು ಮಂದಿಯ ಹೆಸರನ್ನು ಈ ಇಟ್ಟಿಗೆಯ ಮೇಲೆ ಕೆತ್ತಲಾಗಿದ್ದು, ಜೊತೆಗೆ ಬಿಜೆಪಿಯ ಕಮಲದ ಚಿಹ್ನೆ ಶ್ರೀರಾಮಚಂದ್ರನ ಮೂರ್ತಿ ಹಾಗೂ ಉದ್ದೇಶಿತ ನೂತನ ಅಯೋಧ್ಯೆ ದೇಗುಲದೊಂದಿಗೆ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.
15 ಕೆಜಿ ತೂಕವಿರುವ ಈ ಬೆಳ್ಳಿಯ ಇಟ್ಟಿಗೆಯನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಲಾಗುತ್ತಿದ್ದು, ಪ್ರಧಾನಿ ತಮ್ಮ ಸ್ವಹಸ್ತದಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ದೇಗುಲಕ್ಕೆ ಸಮರ್ಪಿಸಲಿದ್ದಾರೆ.