ಕೋಲಾರ, ಬೀದರ್, ವರುಣಾ, ಕಡೂರು… ಸಿದ್ದರಾಮಯ್ಯ ಈ ಬಾರಿ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಮತದಾರರ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ. ಯುಗಾದಿ ಹಬ್ಬದ ದಿನದಂದು ತಮ್ಮ ಸ್ಪರ್ಧೆಯ ಕ್ಷೇತ್ರದ ಹೆಸರನ್ನು ಅಂತಿಮಗೊಳಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ನಡೆದಿರುವ ಈ ಸಮಯದಲ್ಲಿ ರಾಜ್ಯಾದ್ಯಂತ ಎಲ್ಲಾ ಪಕ್ಷಗಳೂ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಇನ್ನೂ ಕ್ಷೇತ್ರ ಆಯ್ಕೆಯ ಗೊಂದಲವೇ ಬಗೆಹರಿದಿರಲಿಲ್ಲ. ಈ ಮೊದಲೇ ಕೋಲಾರದಿಂದ ತಮ್ಮ ಉಮೇದುವಾರಿಕೆ ಘೋಷಿಸಿದ್ದರು. ಕೋಲಾರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದ್ದಕ್ಕಿದ್ದಂತೆಯೇ ಸಂಚಲನವೂ ಉಂಟಾಗಿತ್ತು. ಆದರೆ ಕಳೆದ ದೆಹಲಿ ಭೇಟಿ ಬಳಿಕ ಹೈಕಮ್ಯಾಂಡ್ ತಮ್ಮ ಮನಸು ಬದಲಿಸಿದ್ದ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಇದರಿಂದ ಕೋಲಾರದಲ್ಲಿ ಕಾಂಗ್ರೆಸ್ ಪಾಳಯಕ್ಕೆ ತೀವ್ರ ನಿರಾಶೆಯುಂಟಾಗಿತ್ತು.
ಕೋಲಾರ ಕ್ಷೇತ್ರ ಸುರಕ್ಷಿತವಲ್ಲ ಎಂಬ ವಾದವನ್ನು ಖಂಡಿಸಿ ಹಾಗೂ ಸಿದ್ದರಾಮಯ್ಯ ಯಾವ ಕಾರಣಕ್ಕೂ ಸಹ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಹಿಂಜರಿಯಬಾರದೆಂದು ಒತ್ತಾಯಿಸಿ ಅವರ ಬೆಂಬಲಿಗರು ಸೋಮವಾರ ಸಿದ್ದರಾಮಯ್ಯ ನಿವಾಸದ ಮುಂದೆ ಧರಣಿ ಆಗ್ರಹ ಪ್ರಾರಂಭಿಸಿದ್ದರು.
ಬೆಂಬಲಿಗರೊಡನೆ ಮಾತನಾಡಿರುವ ಸಿದ್ದರಾಮಯ್ಯ ನಾಳೆ ನೂತನ ಸಂವತ್ಸರದ ಶುಭ ಸಂದರ್ಭದಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.