ಬೆಂಗಳೂರು: ದೇವೇಗೌಡರು-ಕುಮಾರಸ್ವಾಮಿ ಹೇಳಿದಕ್ಕೆಲ್ಲಾ ತಲೆಯಾಡಿಸಿಕೊಂಡು ಇದ್ದರೆ ಮಾತ್ರ, ಜೆಡಿಎಸ್ ಪಕ್ಷದಲ್ಲಿರಲು ಸಾಧ್ಯ. ನ್ಯಾಯ ಕೇಳುವವರನ್ನು ಪಕ್ಷದಿಂದ ಕಿತ್ತೊಗೆಯಲಾಗುತ್ತದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಅನುಭವಿಸಿದ್ದನ್ನೇ ಇಂದಿಗೂ ಜೆಡಿಎಸ್‍ನಲ್ಲಿರುವ ಎಲ್ಲಾ ಮುಖಂಡರೂ ಅನುಭವಿಸುತ್ತಿದ್ದಾರೆ. ಅಪ್ಪ ಮಕ್ಕಳ ಸರ್ವಾಧಿಕಾರದಿಂದ ಬೇಸತ್ತು ಜೆಡಿಎಸ್ ತೊರೆದು ನನ್ನಂತೆಯೇ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು .
ಜೆಡಿಎಸ್ ಯಾವತ್ತೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜೆಡಿಎಸ್ ನಿರೀಕ್ಷಿಸುವುದೂ ಸಹ ಅತಂತ್ರ ಸರ್ಕಾರವನ್ನೇ. ಇನ್ನು ಬಿಜೆಪಿ ಭ್ರಷ್ಟಾಚಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಹೀಗಾಗಿ ನನ್ನ ಸುಧೀರ್ಘ ರಾಜಕಾರಣದ ಅನುಭವದ ಆಧಾರದ ಮೇಲೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದರು. ಜನರು ಎಲ್ಲವನ್ನೂ ಹೋಲಿಕೆ ಮಾಡುತ್ತಿದ್ದು, ಕಾಂಗ್ರೆಸ್ ನೀಡಿದ್ದ ಸುಭದ್ರ ಆಡಳಿತ ಜನತೆಗೆ ನೆನೆಪಿದೆ ಎಂದು ಸಿದ್ದರಾಮಯ್ಯ ನುಡಿದರು. ಇಂದು ಕಾಂಗ್ರೆಸ್ ಸೇರುತ್ತಿರುವ ಜೆಡಿಎಸ್‍ನ ಎಲ್ಲಾ ನಾಯಕರೂ ಒಂದಲ್ಲ ಒಂದು ಕಾಲದಲ್ಲಿ ಕಾಂಗ್ರೆಸಿನವರೇ ಆಗಿದ್ದರು. ಹೀಗಾಗಿ ಇದೊಂದು ರೀತಿ ಘರ್ ವಾಪಸಿ ಎಂದರು.