ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬದ ವಿರುದ್ಧ ಮುಡಾ ಹಗರಣಕ್ಕೆ (Muda scam) ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ದೂರು ಸಲ್ಲಿಸಿದ್ದರು. ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (Court) ಇಂದು ವಿಚಾರಣೆ ವೇಳೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್ ಮತ್ತೆ ಸಮಯ ಕೋರಿ ನ್ಯಾಯಾಲಯದ ಮುಂದೆ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಮತ್ತಷ್ಟು ಸಮಯ ನೀಡುವುದಕ್ಕೆ ನಿರಾಕರಿಸಿ, ವಿಚಾರಣೆಗೆ ಹೊಸ ಗಡುವುಗಳನ್ನು ಸೂಚಿಸಿದೆ.
ಅದೇ ರೀತಿ ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ವೆಂಕಟೇಶ್ ಅರಬಟ್ಟಿ ಗೈರಾಗಿದ್ದು, ಅವರ ಜ್ಯೂ ನಿಯರ್ ವಕೀಲರು ಹಾಜರಾಗಿದ್ದರು. ಈ ವೇಳೆ ಅಂತಿಮ ವರದಿ ಸಲ್ಲಿಸಲು ಸಮಯ ಬೇಕೆಂದು ಮನವಿ ಮಾಡಿದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಜಡ್ಜ್ ಇನ್ನೂ ಸಮಯ ನೀಡಲು ಸಾಧ್ಯವಿಲ್ಲ. ನೀವು ಅಂತಿಮ ವರದಿ ಹಾಕ್ತೀರಾ ಇಲ್ಲವೋ ? ಎಂದರು. ವಿಚಾರಣೆ ಸಮಯದಲ್ಲಿ ಎಸ್ಪಿಪಿ ಗೈರಾಗಿದ್ದನ್ನು ಕೋರ್ಟ್ ಗಮನಿಸಿ, ಅವರ ಹಾಜರಿಗೆ ಸೂಚಿಸಿ ಕೆಲ ಕಾಲ ವಿಚಾರಣೆ ಮುಂದೂಡಿತು.
ಮತ್ತೆ ವಿಚಾರಣೆ ಆರಂಭವಾದಾಗ ನ್ಯಾಯಾಲಯವು ಡಿಸೆಂಬರ್ 18ರೊಳಗೆ ಅಂತಿಮ ವರದಿ ಸಲ್ಲಿಸಬೇಕೆಂದು ಸೂಚಿಸಿದೆ. ಬಿ.ರಿಪೋರ್ಟ್ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡುವುದಿದ್ದರೇ ಡಿ. 16ರ ಒಳಗೆ ಸಲ್ಲಿಸುವುವಂತೆ ದೂರುದಾರರು, ಲೋಕಾಯುಕ್ತ ಹಾಗೂ ಇಡಿಗೆ ಸೂಚನೆ ನೀಡಿದೆ. ಈ ಹಿಂದೆ ಬಿ.ರಿಪೋರ್ಟ್ ಸಲ್ಲಿಸಲು ಅಕ್ಟೋಬರ್ 8 ರಿಂದ 2 ತಿಂಗಳು ಗಡುವು ನೀಡಿತ್ತು. ಹೀಗಾಗಿ ಮತ್ತೆ ಸಮಯ ನೀಡಲು ಕೋರ್ಟ್ ನಿರಾಕರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ನೀಡಿದ್ದ ಪೂರ್ವಾನುಮತಿ ಪುರಸ್ಕರಿಸಿ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯು ವಿಭಾಗೀಯ ಪೀಠದಲ್ಲಿ ಮುಂದಿನ ವರ್ಷ ಜ.8ಕ್ಕೆ ನಡೆಯಲಿದೆ.