ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದಿಲ್ಲ ಎಂಬ ಬಗ್ಗೆ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ವ್ಯಂಗ್ಯವಾಡಲು ಆರಂಭಿಸಿದ್ದಾರೆ. ವರ್ತೂರು ಪ್ರಕಾಶ್ ಕೋಲಾರದಲ್ಲೇ ಸ್ಪರ್ಧಿಸುವಂತೆ ಸಿದ್ದುಗೆ ಸವಾಲು ಒಡ್ಡಿದ ಬೆನ್ನಲ್ಲೇ, ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ʼ ಸಿದ್ದರಾಮಯ್ಯರಿಗೆ ಅಲೆದಾಟ ತಪ್ಪಿದ್ದಲ್ಲ ಎಂದಿದ್ದಾರೆ.
ಮಡಿಕೇರಿಯ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 23 ನೇ ಕೊಡವ ಕೌಟುಂಬಿಕ ಹಾಕಿ ಕ್ರೀಡೋತ್ಸವವನ್ನು ಶನಿವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, “ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಲೆದಾಟ ತಪ್ಪಿದ್ದಲ್ಲ. ಕ್ಷೇತ್ರ ಹುಡುಕುವ ಅಲೆದಾಟ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಕೋಲಾರಕ್ಕೆ ಹೋದಾಗಲೇ ಸಂಶಯ ಮೂಡಿತ್ತು. ಅಲ್ಲಿ ಅವರು ಗೆಲ್ಲಲ್ಲ ಎಂದು ಎಲ್ಲ ವರದಿಗಳು ಹೇಳಿದ್ದವು. ಹಾಗಾಗಿ ಹೈಕಮಾಂಡ್ ಅವರಿಗೆ ಅಲ್ಲಿ ಸ್ಪರ್ಧಿಸುವುದು ಬೇಡ ಎಂದು ಹೇಳಿರಬಹುದು ಎಂದು ಸಿಎಂ ಹೇಳಿದ್ದಾರೆ.