Sunday, January 25, 2026
Homeಟಾಪ್ ನ್ಯೂಸ್HD KUMARASWAMY: ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ: ಹೆಚ್​​​​​​​​​​​​ಡಿಕೆ ಲೇವಡಿ

HD KUMARASWAMY: ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ: ಹೆಚ್​​​​​​​​​​​​ಡಿಕೆ ಲೇವಡಿ

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಓರ್ವ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್​​​.ಡಿ. ಕುಮಾರಸ್ವಾಮಿ (HD Kumaraswamy) ಅವರು ಲೇವಡಿ ಮಾಡಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಖಾಸಗಿ ಹೋಟೆಲ್​​​​​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್​​​​​​ಡಿಕೆ, ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ ದೇವರಾಜ ಅರಸು ಅವರ ದಾಖಲೆ ಮುರಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ದೇವರಾಜ ಅರಸು ದಾಖಲೆ ಮುರಿದೆ ಅಂತಾ ಹೇಳ್ತಿದ್ದಾರಲ್ಲಾ. ಹಿಂದೆ ಇಂದಿರಾಗಾಂಧಿ ವಿರುದ್ಧ ಅರಸು ಸೆಡ್ಡು ಹೊಡೆದು ನಿಂತಿದ್ದರು. ನಿರಂತರವಾಗಿ ಅವರು ಅಧಿಕಾರ ನಡೆಸಿದ್ದರು. ಸಿದ್ದರಾಮಯ್ಯ ಅವರು ಈಗ ರಾಹುಲ್ ಗಾಂಧಿ ಯಾವಾಗ ಹೋಗು ಅಂತಾರೆ ಅಂತಾ ಕಾಯುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಇನ್ನು ಜಿ ರಾಮ್ ಜಿ (G RAM G) ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದ್ದು, ಆ ಸುಳ್ಳನ್ನು ಎದುರಿಸಲು ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲೊಡ್ಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಂತೆ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆ ಬಗ್ಗೆ ಕಾಂಗ್ರೆಸ್ ಹರಡುತ್ತಿರುವ ಸುಳ್ಳುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು; ಕಾಂಗ್ರೆಸ್ ಸುಳ್ಳುಗಳನ್ನು ಜನರು ನಂಬುವ ಕಾಲ ಹೋಗಿದೆ ಎಂದರು.

‘ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ’

ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದೆ. ಯಾವುದಾದರೂ ಪ್ರಮುಖ ಯೋಜನೆಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನಿಟ್ಟಿದ್ದಾರೆಯೇ? ಎಲ್ಲಾ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

‘ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ’

ಹೊರಗೆ ಅಪಪ್ರಚಾರ ಮಾಡುತ್ತಿರುವುದು ಸಾಲದು ಎಂಬಂತೆ ವಿಧಾನಸಭೆ ಅಧಿವೇಶನವನ್ನು ಬೇರೆ ಕರೆಯುತ್ತಿದ್ದಾರೆ. ಪಾದಯಾತ್ರೆಯನ್ನು ಕೂಡ ನಡೆಸುತ್ತಾರಂತೆ! ಯಾವ ಪುರುಷಾರ್ಥಕ್ಕೆ ಇದೆಲ್ಲವನ್ನೂ ಮಾಡುತ್ತಾರೆ? ನರೇಗಾ ಹೆಸರಿನಲ್ಲಿ ನಕಲಿ ಬಿಲ್’ಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ? ಕಾಂಗ್ರೆಸ್’ನವರಿಂದ ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಕ್ಕುತ್ತದೆಯೇ? ಕಾರ್ಮಿಕರಿಗೆ ನ್ಯಾಯ ಮಾಡದೆ ಇವರು ಏನು ಮಾಡುತ್ತಿದ್ದರು? ನಕಲಿ ಬಿಲ್ಲುಗಳನ್ನು ತಡೆಯಲು, ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಲು ಇವರು ವಿಫಲವಾಗಿದ್ದು ಯಾಕೆ? ಎಂದು ಸಚಿವ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ನರೇಗಾ ಯೋಜನೆ ಸ್ಥಗಿತವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಅವರ ಸರಕಾರ ಸರಿಪಡಿಸಿ ಅದರಲ್ಲಿ ಅನೇಕ ಮಹತ್ವದ ಸುಧಾರಣೆಗಳನ್ನು ತಂದಿದೆ. ಲೋಪಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡುವುದು ತಪ್ಪು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಸರಿಯಲ್ಲ. ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯ್ತಿ ಅಧಿಕಾರಕ್ಕೆ ಆಗಲಿ ಅಥವಾ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಈ ಯೋಜನೆಗೆ ಪೂರ್ಣ ಅನುದಾನ ನೀಡುತಿರುವುದು ಕೇಂದ್ರ ಸರ್ಕಾರ. ಕೇಂದ್ರ ನೀಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಅದರಲ್ಲಿ ಪಾರದರ್ಶಕತೆ ಇಲ್ಲ. ಈ ಯೋಜನೆ ಹೆಸರಲ್ಲಿ ಕಳ್ಳಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಮಾಡಲಾಗಿದೆ. ಇದು ಶುರು ಆದಾಗಿನಿಂದ ಆಗಿರುವ ಲೋಪಗಳನ್ನು ಸರಿಪಡಿಸಿ ಹೊಸ ಯೋಜನೆ ರೂಪಿಸಲಾಗಿದೆ. ಮನರೇಗಾದಲ್ಲಿ ಇದ್ದ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ವಿವರಿಸಿದರು.

ಜಿ ರಾಮ್ ಜಿ ಯೋಜನೆಯನ್ನು 60:40% ಅನುಪಾತದಲ್ಲಿ ರೂಪಿಸಲಾಗಿದೆ. ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಕ್ರಮವಾಗಿ ಹಣ ಪಡೆಯಲಾಗಿದೆ. ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇರಲಿ ಅಂತ 40% ರಾಜ್ಯದ ಪಾಲು ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಕೊಡಲಾಗಿದೆ, ಎಲ್ಲವನ್ನೂ ಕಿತ್ತುಕೊಂಡಿಲ್ಲ. ಇದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಕೇಂದ್ರ ಮಾಡಿದ್ದನ್ನೆಲ್ಲಾ ಬಿಜೆಪಿಯವರು ಸಮರ್ಥಿಸಿಕೊಳ್ಳುವುದು ಮಹಾ ಅಪರಾಧ: ಸಿಎಂ

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!