Saturday, January 25, 2025
Homeಬೆಂಗಳೂರುಕ್ಷೇತ್ರ ಆಯ್ಕೆ ಕಗ್ಗಂಟು : ಇನ್ನೂ ಹೊರಬೀಳದ ಸಿದ್ದು ತೀರ್ಮಾನ

ಕ್ಷೇತ್ರ ಆಯ್ಕೆ ಕಗ್ಗಂಟು : ಇನ್ನೂ ಹೊರಬೀಳದ ಸಿದ್ದು ತೀರ್ಮಾನ

ಚುನಾವಣೆಗೆ ದಿನಗಣನೆ ಶುರುವಾದರೂ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಗೊಂದಲ ಮಾತ್ರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಕೂಸು ಹುಟ್ಟುವ ಮುಂಚೆಯೇ ಕುಲಾವಿ ಎಂಬಂತೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಘೋಷಿಸಿದ್ದ ಸಿದ್ದರಾಮಯ್ಯ ಬಳಿಕ ಹಠಾತ್ತಾಗಿ ಕಣದಿಂದ ಹಿಂದೆ ಸರಿದಿದ್ದರು.
ಇದಕ್ಕೆ ಕೋಲಾರದಲ್ಲಿ ನಡೆಯುತ್ತಿರುವ ರಣತಂತ್ರ ಹಾಗೂ ಕೋಲಾರದಿಂದ ಸ್ಪರ್ಧಿಸದಿರುವಂತೆ ಹೈಕಮ್ಯಾಂಡ್ ಸಲಹೆ ಕಾರಣ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಹೈಕಮ್ಯಾಂಡ್ ನಿಲುವಿಗೆ ಬದ್ದ ಎಂದು ಮುಗುಮ್ಮಾಗಿ ನುಡಿದಿದ್ದರು. ಅಂದಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಸ್ಪರ್ಧೆ ಕುರಿತಂತೆ ದಿನಕ್ಕೊಂದು ಊಹಾಪೋಹಗಳು ಏಳುತ್ತಿದ್ದರೂ ಸಹ ಇನ್ನೂ ಉಮೇದುವಾರಿಕೆ ಯಾವ ಕ್ಷೇತ್ರದಿಂದ ಎಂಬುದು ಖಚಿತಗೊಂಡಿಲ್ಲ.
ಬಳಿಕ ವರುಣಾದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತಾದರೂ ಅದು ಹೆಚ್ಚುದಿನ ಉಳಿಯಲಿಲ್ಲ. ಹೀಗೇ ಬೀದರ್‍ನಿಂದ ಸ್ಪರ್ಧಿಸುತ್ತಾರೆ. ಕಡೂರಿನಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ಸಮಯೋಚಿತವಾಗಿ ಹೊರಬಿದ್ದರೂ ಸಿದ್ದರಾಮಯ್ಯ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.
ಬಹುಶಃ ರಕ್ಷಣಾತ್ಮಕ ಆಟವಾಡುವ ದಿಸೆಯಲ್ಲಿ ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧಿಸಬಹುದೆಂದು ಊಹಿಸಲಾಗಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಕರ್ನಾಟಕದಲ್ಲಿ ಅವರು ಎಲ್ಲಿ ಬೇಕಾದರೂ ನಿಲ್ಲಬಹುದು. ಹೈಕಮ್ಯಾಂಡ್ ಕೂಡ ತೀರ್ಮಾನವನ್ನು ಅವರಿಗೆ ಬಿಟ್ಟಿದೆ ಎಂದಿದ್ದಾರೆ.
ಆದರೆ ಈ ಬಗ್ಗೆ ತಮ್ಮ ಆಪ್ತವಲಯದಲ್ಲಿ ನಡೆದ ಚರ್ಚೆಯಲ್ಲಿ ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸದೇ ಇರುವಂತೆ ಸಲಹೆ ಕೇಳಿಬಂದಿದೆ ಎನ್ನಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!