ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆ ವಿಚಾರ ಕಾಂಗ್ರೆಸ್‌ಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದು ಗೆಲುವಿನ ಹಾದಿ ಕಠಿಣ ಎಂದು ಸ್ಪರ್ಧೆಗೆ ಹೈಕಮಾಂಡ್ ಒಪ್ಪಿಗೆ ನೀಡದಿರುವುದು ಒಂದೆಡೆಯಾದರೆ, ಕೋಲಾರ ಭಾಗದ ಕಾಂಗ್ರೆಸ್ ಮುಖಂಡರ ಅಸಮಾಧಾನ ಇನ್ನೊಂದೆಡೆ. ಇದೆರಡೂ ಸಾಲದೆಂಬಂತೆ ಕೋಲಾರದಲ್ಲಿರುವ ಸಿದ್ದು ಅಭಿಮಾನಿಗಳು ಮಾಡುತ್ತಿರುವ ಹೈಡ್ರಾಮ ಮತ್ತೊಂದೆಡೆ. ಒಟ್ಟಾರೆ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಸ್ಪರ್ಧೆ ಗಂಟಲ ಮುಳ್ಳಾಗಿ ಪರಿಣಮಿಸಿದೆ.
ಸಿದ್ದರಾಮಯ್ಯ ಅವರ ಅತಂತ್ರ ಪರಿಸ್ಥಿತಿಯ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಮಾಜಿ ಮುಖ್ಯಮಂತ್ರಿಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಅನ್ನು ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ಕೈ ಪಾಳೆಯ ಕೌಂಟರ್ ಕೊಡಲು ಹೆಣಗಾಡುತ್ತಿದ್ದು, ಕ್ಷೇತ್ರ ಆಯ್ಕೆ ಮಾಡುವಂತೆ ಸಿದ್ದುಗೆ ಒತ್ತಡ ಹೇರುತ್ತಿದೆ. ಮಾಧ್ಯಮಗಳು ಕೂಡಾ ಸಿದ್ದರಾಮಯ್ಯ ಅವರ ಕ್ಷೇತ್ರದ ಬಗ್ಗೆಯೇ ಗಮನ ಕೇಂದ್ರೀಕರಿಸಿದ್ದು, ಅದೂ ಕೂಡಾ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಆತಂಕವೂ ಪಕ್ಷಕ್ಕಿದೆ.
ಬಂಡಾಯವಿಲ್ಲದ ಸುರಕ್ಷಿತ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳುವಾಗಲೇ ಸಿದ್ದರಾಮಯ್ಯ ಅವರ ಕ್ಷೇತ್ರವೂ ಅಂತಿಮಗೊಂಡರೆ ಪಕ್ಷಕ್ಕಾಗುವ ಡ್ಯಾಮೇಜ್ ದೊಡ್ಡ ಮಟ್ಟದಲ್ಲಿ ಕಡಿಮೆ ಆಗಬಹುದೆಂಬ ತರ್ಕಬದ್ಧ ಆಲೋಚನೆಯಲ್ಲಿ ಕರ್ನಾಟಕ ಕಾಂಗ್ರೆಸ್ ಇದೆ.