ಮೈಸೂರು: ವರುಣಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸುವ ಸಲುವಾಗಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಮ್ಯಾಚ್‍ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ ಅವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು.
2018ರಲ್ಲಿಯೇ ಬಿಜೆಪಿ ಹಾಗೂ ಜೆಡಿಎಸ್ ಚುನಾವಣಾ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಹೇಳಿತ್ತು. ವರುಣಾ ಹಾಗೂ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹಾಗೂ ತನ್ನನ್ನು ಹಣಿಯಲು ಈಗ ಮತ್ತೆ ಜೆಡಿಎಸ್ -ಬಿಜೆಪಿ ಒಂದಾಗಿದೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಈ ಮುನ್ನ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದ ಸಿದ್ದರಾಮಯ್ಯನವರು ಬಳಿಕ ವರುಣಾ ಕ್ಷೇತ್ರವನ್ನು ಆಯ್ದುಕೊಂಡಿರುವುದಾಗಿ ಘೋಷಿಸಿದ್ದರು. ಈಗ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಳಗದಿಂದ ಪ್ರಚಾರ ಕಾರ್ಯ ಪ್ರಾರಂಭಗೊಂಡಿದೆ.