ಲೋಕಾಯುಕ್ತ ಅಧಿಕಾರಿಗಳೆಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಮೂವರು ವಂಚಕರನ್ನು ಸಿದ್ದಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಾಗೇಶ್ವರ್ ರೆಡ್ಡಿ, ವಿನೀತ್ ಕುಮಾರ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಬಂಧಿತ ಆರೋಪಿಗಳು.
ಆಂಧ್ರಪ್ರದೇಶ ಮೂಲದವರಾದ ಇವರು ಕೆಐಎಡಿಬಿ ಜಂಟಿ ನಿರ್ದೇಶಕಿ ಆಶಾ ಭರತ್ ಎಂಬುವವರಿಗೆ ಬೆದರಿಕೆ ಒಡ್ಡಿದ್ದರು. ನೀವು ಭ್ರಷ್ಟಾಚಾರ ನಡೆಸುತ್ತಿದ್ದೀರೆಂದು ಎಡಿಜಿಪಿಗೆ ದೂರು ನೀಡುವುದಾಗಿ ಹೇಳಿ 1 ಲಕ್ಷ ರೂ. ವಸೂಲಿ ಮಾಡಿದ್ದರು. ಮೋಸ ಹೋಗಿದ್ದು ತಿಳಿದ ನಂತರ ಆಶಾ ಭರತ ಡಿಸಿಪಿ ಕೃಷ್ಣ ಕಾಂತ್ ಅವರಿಗೆ ದೂರು ನೀಡಿದ್ದರು.
ಈ ಆರೋಪಿಗಳು ಹಿಂದೆಯೂ ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ. ಭಾರತೀಯ ರೈಲ್ವೇ ಹಾಗೂ ಯುರೇನಿಯಂ ಕಾರ್ಪೋರೇಷನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗೇಶ್ವರಿ ರೆಡ್ಡಿ ಬಳಿಕ ವಂಚಕನಾಗಿ ಪರಿವರ್ತಿತನಾಗಿದ್ದ. 2010 ರಲ್ಲಿ ಟ್ರಾವೆಲ್ ಟಿಕೆಟ್ ಬುಕ್ ವಂಚನೆ, 2013 ರಲ್ಲಿ ಎಟಿಎಂನಲ್ಲಿ ಹಣ ವಂಚನೆ, 2015 ರಲ್ಲಿ ಆಕ್ಸಿಸ್ ಬ್ಯಾಂಕ್ ಖಾತೆದಾರರಿಗೆ ಆನ್‍ಲೈನ್ ವಂಚನೆ ಹೀಗೆ ಹಲವು ಪ್ರಕರಣಗಳಲ್ಲಿ ಜೈಲುವಾಸಿಯಾಗಿದ್ದ, ಜೈಲಿನಿಂದ ಹೊರಬಂದ ಬಳಿಕವೂ ಹಳೇ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.