ಬೆಳಗಾವಿ: ದೇವರ ಸನ್ನಿಧಿಗೆ ಬರುವ ಭಕ್ತರು ತಮ್ಮ ಜೀವನದ ಕಷ್ಟಗಳು ದೂರವಾಗಲಿ, ಇಷ್ಟಾರ್ಥಗಳು ಈಡೇರಲಿ ಎಂದು ಹರಕೆ ಪತ್ರ (Letter) ಬರೆದು ಹುಂಡಿಗೆ ಹಾಕುವುದು (Shocking) ಹೊಸ ವಿಚಾರವಲ್ಲ. ಆದರೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗದ ಶ್ರೀ ರಾಘವೇಂದ್ರ ಸ್ವಾಮಿ ಮಠದ (Raghavendra Mutt) ಹುಂಡಿಯಲ್ಲಿ ಪತ್ತೆಯಾದ ಒಂದು ಪತ್ರ ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಹುಂಡಿಯಲ್ಲಿದ್ದ ಕಾಣಿಕೆಗಳನ್ನು ಎಣಿಸುವ ವೇಳೆ ಸಿಬ್ಬಂದಿಯ ಗಮನಕ್ಕೆ ಈ ಪತ್ರ ಬಂದಿದೆ. ಪತ್ರವನ್ನು ತೆರೆದು ನೋಡಿದಾಗ ಅದರಲ್ಲಿದ್ದ ಮನವಿ ಕಂಡು ಕೆಲಕಾಲ ಸಿಬ್ಬಂದಿಯೇ ಅಚ್ಚರಿಗೊಂಡಿದ್ದಾರೆ.
ಯುವಕನೊಬ್ಬ ತನ್ನ ಪತ್ರದಲ್ಲಿ, “ರಾಯರೇ… ಆ ಹುಡುಗಿಯಿಂದ ನನ್ನನ್ನು ಕಾಪಾಡಿ. ಆಕೆಯಿಂದ ಆಗುತ್ತಿರುವ ತೊಂದರೆಯಿಂದ ಮುಕ್ತಿ ಕೊಡಿ” ಎಂದು ಭಕ್ತಿಭಾವದಿಂದ ಬರೆದು ಮನವಿ ಮಾಡಿದ್ದಾನೆ. ಸಾಮಾನ್ಯವಾಗಿ ಉದ್ಯೋಗ, ಆರೋಗ್ಯ, ಆರ್ಥಿಕ ಸಂಕಷ್ಟ, ಮದುವೆ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಭಕ್ತರು ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಆದರೆ ಹುಡುಗಿಯೊಬ್ಬಳ ಕಾಟದಿಂದ ಪಾರಾಗಲು ದೇವರಲ್ಲಿ ಮೊರೆ ಹೋಗಿರುವುದು ವಿಭಿನ್ನ ಚರ್ಚೆಗೆ ಕಾರಣವಾಗಿದೆ.
ಈ ಪತ್ರವನ್ನು ನೋಡಿದ ಮಠದ ಸಿಬ್ಬಂದಿ ಹಾಗೂ ಅಲ್ಲಿದ್ದ ಕೆಲ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದು, ಬಳಿಕ ಈ ವಿಷಯ ನಗೆಗೂ ಕಾರಣವಾಗಿದೆ. ವೈಯಕ್ತಿಕ ಸಮಸ್ಯೆಯನ್ನೂ ದೇವರ ಮುಂದೆ ಮನಬಿಚ್ಚಿ ಹೇಳಿರುವ ರೀತಿ ಅನೇಕರ ಗಮನ ಸೆಳೆದಿದೆ.
ಹರಕೆ ಪತ್ರದ ವಿಷಯ ಈಗ ರಾಮದುರ್ಗದಲ್ಲಿ ಮಾತುಕತೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವೇಗವಾಗಿ ಹರಿದಾಡುತ್ತಿದೆ. ದೇವರ ಮೇಲಿನ ಭಕ್ತಿಯ ಜೊತೆಗೆ ಜೀವನದ ಸಣ್ಣ-ಪುಟ್ಟ ಸಮಸ್ಯೆಗಳನ್ನೂ ಭಕ್ತರು ಎಷ್ಟು ನಂಬಿಕೆಯಿಂದ ದೇವರ ಮುಂದೆ ಇಡುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ಕುತೂಹಲಕಾರಿ ಉದಾಹರಣೆಯಾಗಿದೆ.