ಕೋಲಾರ: ನೀರಿನಲ್ಲಿ ಮುಳುಗುತ್ತಿದ್ದ ಪುಟ್ಟ ಮಕ್ಕಳ ರಕ್ಷಣೆ ಮಾಡಲು ಹೋಗಿ ಇಬ್ಬರು ಮಹಿಳೆಯರು ಕೆರೆಯಲ್ಲಿ ಮುಳುಗಿ ಪ್ರಾಣಬಿಟ್ಟಿರುವ (Shocking) ಅತ್ಯಂತ ದುರದೃಷ್ಟಕರ ಘಟನೆ ಕೋಲಾರ (Kolar) ಹೊರವಲಯದ ಅರಹಳ್ಳಿ ಕೆರೆಯಲ್ಲಿ ನಡೆದಿದೆ.
ಬಟ್ಟೆ ತೊಳೆಯಲು ಬಂದಿದ್ದ ಮಹಿಳೆಯರು
ಕೋಲಾರ ನಗರದ ನಿಸಾರ್ ನಗರದ ನಿವಾಸಿ 25 ವರ್ಷದ ಮೊಹಮದಿ ಹಾಗೂ 26 ವರ್ಷದ ಬೆಂಗಳೂರಿನ ಸಲ್ಮಾ ಮೃತಪಟ್ಟ ದುರ್ದೈವಿಗಳು. ಇಬ್ಬರು ಮಹಿಳೆಯರು ತಮ್ಮ ಕುಟುಂಬದ ಮಕ್ಕಳೊಂದಿಗೆ ಬಟ್ಟೆ ತೊಳೆಯುವ ಸಲುವಾಗಿ ಅರಹಳ್ಳಿ ಕೆರೆಗೆ ತೆರಳಿದ್ದರು. ಈ ವೇಳೆ ಮಕ್ಕಳು ಆಟವಾಡುತ್ತಾ ಕೆರೆಯ ಆಳವಾದ ಪ್ರದೇಶಕ್ಕೆ ಹೋದಾಗ ನೀರಿನಲ್ಲಿ ಮುಳುಗತೊಡಗಿದ್ದಾರೆ. ಇದನ್ನು ಗಮನಿಸಿದ ಮೊಹಮದಿ ತಕ್ಷಣವೇ ನೀರಿಗಿಳಿದು ಮಕ್ಕಳನ್ನು ಸುರಕ್ಷಿತವಾಗಿ ದಡಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಳತಿ ರಕ್ಷಿಸಲು ಹೋಗಿ ಸಲ್ಮಾ ಕೂಡ ಸಾವು
ಆದರೆ, ಮಕ್ಕಳನ್ನು ರಕ್ಷಿಸಿದ ಬಳಿಕ ಮೊಹಮದಿ ಆಯತಪ್ಪಿ ಕೆರೆಯ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತನ್ನ ಗೆಳತಿಯನ್ನು ರಕ್ಷಿಸಲು ಸಲ್ಮಾ ಕೂಡ ನೀರಿಗಿಳಿದಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಿದ್ದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿದ್ದಾರೆ. ಸ್ಥಳೀಯರು ಗಮನಿಸಿ ಸಹಾಯಕ್ಕೆ ಬರುವಷ್ಟರಲ್ಲಿ ಇಬ್ಬರೂ ಜಲಸಮಾಧಿಯಾಗಿದ್ದರು.
ಮೃತ ಮೊಹಮದಿ ಅವರ ಮನೆಯಲ್ಲಿ ಮದುವೆ ಕಾರ್ಯವಿದ್ದ ಕಾರಣ ಸಲ್ಮಾ ಅವರು ಬೆಂಗಳೂರಿನಿಂದ ಕೋಲಾರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಮಕ್ಕಳನ್ನು ಉಳಿಸಿ ತಾವು ಪ್ರಾಣಬಿಟ್ಟ ಮಹಿಳೆಯರ ಸಾಹಸ ಮತ್ತು ಅಕಾಲಿಕ ಮರಣ ಊರಿನಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶಿಕ್ಷರೊಡನೆ ಈಜಲು ಹೋದಾಗ ದುರಂತ – ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು!
ಚಿಕ್ಕಮಗಳೂರಿನ (Chikkamagaluru ) ಕೊಪ್ಪ ತಾಲೂಕಿನಲ್ಲಿ ಭೀಕರ ದುರಂತ ಸಂಭವಿಸಿದೆ. ಶಿಕ್ಷಕರ ಜೊತೆ ಈಜಲು (Swimming ) ಹೋಗಿದ್ದ ವಿದ್ಯಾರ್ಥಿಯೊಬ್ಬ (Student ) ನೀರಿನಲ್ಲಿ ಮುಳುಗಿದ್ದಾನೆ.
ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕೇತ್ (14) ಮೃತಪಟ್ಟ ದುರ್ದೈವಿಯಾಗಿದ್ದಾನೆ . ರವಿವಾರ ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಈಜಾಡುತ್ತಿದ್ದ ವೇಳೆ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎನ್ನಲಾಗಿದೆ.
ಮೃತ ಅನಿಕೇತ್ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರ. ಗೋವರ್ಧನ್ ನಾಯಕ್ ಅವರು ಜೀವವಿಮಾ ಪ್ರತಿನಿಧಿಯಾಗಿದ್ದು, ವಿಟ್ಲ ಹಳೆ ಬಸ್ಸು ನಿಲ್ದಾಣದ ಬಳಿ ಜೀವವಿಮಾ ನಿಗಮದ ಕಚೇರಿಯನ್ನು ಹೊಂದಿದ್ದಾರೆ. ಹಿಂದೂ ಸಂಘಟನೆಗಳು ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗಾಗ್ಲೇ ಮರಣೋತ್ತರ ಪರೀಕ್ಷೆ ನಡೆದಿದ್ದು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕ – ನದಿಯಲ್ಲಿ ಶವ ಪತ್ತೆ!