ಚಂಡೀಗಢ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಶಾಕಿಂಗ್ ಎಂಬಂತೆ ಇದೀಗ ಪಿಯುಸಿ ವಿದ್ಯಾರ್ಥಿಗಳಿಬ್ಬರು ಶಾಲೆಯ ಪ್ರಾಂಶುಪಾಲರನ್ನೇ ಇರಿದು ಕೊಂದ ಆಘಾತಕಾರಿ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಜಗ್ಬೀರ್ ಸಿಂಗ್ ಪಾನು ಎಂದು ಗುರುತಿಸಲಾಗಿದೆ. ಇವರು ಹಿಸಾರ್ ಜಿಲ್ಲೆಯ ನರ್ನೌಂಡ್‌ನ ಬಸ್ ಬಾದ್‌ಶಾಪುರದ ಕರ್ತಾರ್ ಮೆಮೋರಿಯಲ್ ಶಾಲೆಯ ನಿರ್ದೇಶಕ ಮತ್ತು ಪ್ರಾಂಶುಪಾಲ.
ಜಗ್ಬೀರ್ ಅವರು ಶಾಲಾ ಆವರಣದಲ್ಲಿ ನಿಂತಿದ್ದಾಗ 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಶಾಲೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜಗ್ಬೀರ್ ಗೆ ಹಲವು ಬಾರಿ ಇರಿದಿದ್ದಾರೆ. ಈ ವೇಳೆ ಶಾಲಾ ಸಿಬ್ಬಂದಿಯು ವಿದ್ಯಾರ್ಥಿಗಳನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಇತ್ತ ಗಂಭೀರ ಗಾಯಗೊಂಡಿರುವ ಜಗ್ಬೀರ್ ನನ್ನು ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಿಸಾರ್‌ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಹೀಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ಜಗ್ಬೀರ್ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಕೊಲೆ ಯಾಕೆ..?: ವಿದ್ಯಾರ್ಥಿಗಳು ಕೂದಲು ಕತ್ತರಿಸಿಕೊಂಡು ಶಾಲೆಗೆ ಬರುವಂತೆ ಮತ್ತು ಶಿಸ್ತು ಕಾಪಾಡಿಕೊಳ್ಳುವಂತೆ ಪ್ರಾಂಶುಪಾಲರು ಕೇಳಿಕೊಂಡಿದ್ದರು. ಆದರೆ ವಿದ್ಯಾರ್ಥಿಗಳು ಕೂದಲು ಕತ್ತರಿಸಲಿಲ್ಲ ಹಾಗೂ ಶಾಲೆಯ ಶಿಸ್ತನ್ನು ಕೂಡ ಪಾಲಿಸಲಿಲ್ಲ. ಇದರಿಂದ ಸಿಟ್ಟುಗೊಂಡ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಎಳೆದಾಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಹನ್ಸಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಯಶವರ್ಧನ್ ತಿಳಿಸಿದ್ದಾರೆ.
ಘಟನೆಯ ಬಳಿಕ ಪ್ರಾಂಶುಪಾಲರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಿಸಾರ್‌ಗೆ ಕಳುಹಿಸಲಾಗಿದೆ. ಪೊಲೀಸರು ಈ ವಿಷಯದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ ಮತ್ತು ತನಿಖೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.