Monday, June 15, 2026
Homeಟಾಪ್ ನ್ಯೂಸ್SHOCKING: ಡಾಬರ್ ಇಂಡಿಯಾ ಕಂಪನಿಗೆ ಅಮೆರಿಕ ಎಫ್‌ಡಿಎ ಶಾಕ್‌, ಉತ್ಪಾದನಾ ಘಟಕದಲ್ಲಿ ದೋಷವಿದೆಯಂತೆ!

SHOCKING: ಡಾಬರ್ ಇಂಡಿಯಾ ಕಂಪನಿಗೆ ಅಮೆರಿಕ ಎಫ್‌ಡಿಎ ಶಾಕ್‌, ಉತ್ಪಾದನಾ ಘಟಕದಲ್ಲಿ ದೋಷವಿದೆಯಂತೆ!

ನವದೆಹಲಿ: ಪ್ರಖ್ಯಾತ ಆಯುರ್ವೇದ ಮತ್ತು ಆರೋಗ್ಯ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಡಾಬರ್ ಇಂಡಿಯಾ (Dabur India) ಕಂಪನಿಯು ಈಗ ಅಮೆರಿಕದ ನಿಯಂತ್ರಣ ಮಂಡಳಿಯ (Shocking) ಕೆಂಗಣ್ಣಿಗೆ ಗುರಿಯಾಗಿದೆ.

ಉತ್ಪಾದನಾ ಘಟಕದಲ್ಲಿ ಸಮಸ್ಯೆ
ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸಾದಲ್ಲಿರುವ ಡಾಬರ್‌ನ ಪ್ರಮುಖ ಉತ್ಪಾದನಾ ಘಟಕದಲ್ಲಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು (US FDA) ಭಾರಿ ತಾಂತ್ರಿಕ ದೋಷಗಳನ್ನು ಪತ್ತೆಹಚ್ಚಿದೆ. ಈ ವರ್ಷದ ಜನವರಿಯಲ್ಲಿ ಅಮೆರಿಕದ ತನಿಖಾಧಿಕಾರಿಗಳ ತಂಡ ನಡೆಸಿದ ದಿಢೀರ್ ತಪಾಸಣೆ ವೇಳೆ ಈ ಗಂಭೀರ ಲೋಪಗಳು ಬೆಳಕಿಗೆ ಬಂದಿದ್ದು, ಕಂಪನಿಯು ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಅಮೆರಿಕದ ಮಾರುಕಟ್ಟೆಗೆ ರಫ್ತಾಗುವ ಡಾಬರ್‌ನ ಆಯುರ್ವೇದ ಉತ್ಪನ್ನಗಳನ್ನು ಇದೇ ಘಟಕದಲ್ಲಿ ತಯಾರಿಸುವುದರಿಂದ ಈ ತನಿಖಾ ವರದಿ ಕಂಪನಿಗೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ಯುಎಸ್ ಎಫ್‌ಡಿಎ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಸಿಲ್ವಾಸಾ ಘಟಕದಲ್ಲಿ ಉತ್ಪಾದನಾ ದಾಖಲೆಗಳನ್ನು ವ್ಯವಸ್ಥಿತವಾಗಿ ತಿರುಚಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅನುಮೋದನೆ ಪಡೆದ ಉತ್ಪನ್ನಗಳನ್ನು ಹೊರತುಪಡಿಸಿ, ಬೇರೆ ಉತ್ಪನ್ನಗಳ ತಯಾರಿಕೆಗೆ ಯಂತ್ರೋಪಕರಣಗಳನ್ನು ಬಳಸಿರುವುದನ್ನು ಮುಚ್ಚಿಡಲು ಅಧಿಕೃತ ದಾಖಲೆಗಳಲ್ಲಿ ಸುಳ್ಳು ಮಾಹಿತಿ ದಾಖಲಿಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ಸ್ವಚ್ಛತೆ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯ
ಇಷ್ಟೇ ಅಲ್ಲದೆ, ಘಟಕದ ಗೋದಾಮಿನಲ್ಲಿ ಸ್ವಚ್ಛತೆ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಕಚ್ಚಾ ಪದಾರ್ಥಗಳನ್ನು ಸಂಗ್ರಹಿಸಿಡುವ ದಾಸ್ತಾನು ಮಳಿಗೆಯೊಳಗೆ, ಪ್ಯಾಕೇಜಿಂಗ್ ಸಾಮಗ್ರಿಗಳ ಪಕ್ಕದಲ್ಲೇ ಹಕ್ಕಿಗಳ ಹಿಕ್ಕೆಗಳು ಬಿದ್ದಿರುವುದು ಇನ್ಸ್ಪೆಕ್ಟರ್‌ಗಳ ಗಮನಕ್ಕೆ ಬಂದಿದೆ. ಇನ್ನು ಕೆಲವು ಮಾದರಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ಪಾಸ್‌ ಆಗಿದೆ ಎಂದು ಕಂಪನಿಯ ಆಂತರಿಕ ದಾಖಲೆಗಳು ತೋರಿಸಿದ್ದರೂ, ಎಫ್‌ಡಿಎ ಅಧಿಕಾರಿಗಳು ಮರುಪರಿಶೀಲಿಸಿದಾಗ ಆ ಸ್ಯಾಂಪಲ್‌ಗಳಲ್ಲಿ ಕಲುಷಿತ ಅಂಶಗಳು ಪತ್ತೆಯಾಗಿರುವುದು ಕಂಪನಿಯ ದಾಖಲಾತಿಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಈ ಭಾರಿ ವಿವಾದದ ಬೆನ್ನಲ್ಲೇ ಡಾಬರ್ ಇಂಡಿಯಾ ಸಂಸ್ಥೆಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ (BSE) ಲಿಖಿತ ಸ್ಪಷ್ಟೀಕರಣ ನೀಡುವ ಮೂಲಕ ಹೂಡಿಕೆದಾರರ ಆತಂಕ ದೂರ ಮಾಡಲು ಪ್ರಯತ್ನಿಸಿದೆ. ಸಿಲ್ವಾಸಾ ಘಟಕದಲ್ಲಿ ಪ್ರಮುಖವಾಗಿ ರಫ್ತು ಮಾರುಕಟ್ಟೆಗಾಗಿ ಪೆಟ್ರೋಲಿಯಂ ಜೆಲ್ಲಿಯನ್ನು ಮಾತ್ರ ಉತ್ಪಾದಿಸಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ತಪಾಸಣೆ ವೇಳೆ ಹಕ್ಕಿಗಳ ಹಿಕ್ಕೆ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿರುವ ಡಾಬರ್, ಆದರೆ ಆ ಜಾಗವು ಉತ್ಪನ್ನಗಳನ್ನು ತಯಾರಿಸುವ ಮುಖ್ಯ ವಲಯದಿಂದ ಬಹಳ ದೂರದಲ್ಲಿದೆ. ಇದರಿಂದಾಗಿ ಉತ್ಪಾದನಾ ಪ್ರಕ್ರಿಯೆಗೆ ಅಥವಾ ಉತ್ಪನ್ನಗಳ ಗುಣಮಟ್ಟಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಸಮರ್ಥಿಸಿಕೊಂಡಿದೆ. ಯುಎಸ್ ಎಫ್‌ಡಿಎ ತನ್ನ ಪರಿಶೀಲನೆಯಲ್ಲಿ ಸಿದ್ಧ ವಸ್ತುಗಳಲ್ಲಿ ಯಾವುದೇ ಲೋಪದೋಷ ಅಥವಾ ಗುಣಮಟ್ಟದ ಕೊರತೆಯನ್ನು ಪತ್ತೆಹಚ್ಚಿಲ್ಲ. ನಮ್ಮ ಎಲ್ಲಾ ಉತ್ಪನ್ನಗಳ ಸುರಕ್ಷತಾ ಗುಣಮಟ್ಟ ಅಚ್ಚುಕಟ್ಟಾಗಿದೆ ಎಂದು ಡಾಬರ್ ಹೇಳಿದೆ. ಆದರೂ, ಅಮೆರಿಕದ ನಿಯಂತ್ರಣ ಮಂಡಳಿ ನೀಡಿರುವ ಎಲ್ಲಾ ಸಲಹೆಗಳು ಮತ್ತು ಸುಧಾರಣಾ ಕ್ರಮಗಳನ್ನು ಕಂಪನಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಗೋದಾಮಿನಅಗತ್ಯವಿರುವ ಎಲ್ಲಾ ಬದಲಾವಣೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುತ್ತಿರುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿದೆ.

ಇದನ್ನೂ ಓದಿ: ಜರ್ಮನಿ ಸರ್ಕಾರದಿಂದ ಭಾರತೀಯರಿಗೆ ಗುಡ್‌ನ್ಯೂಸ್‌

ಹೆಚ್ಚಿನ ಸುದ್ದಿ

Change Language »
error: Content is protected !!