Saturday, May 16, 2026
Homeಕ್ರೈಂSHOCKING: ಮಂಡ್ಯದಲ್ಲಿ ಬೆಚ್ಚಿಬೀಳಿಸುವ ಸತ್ಯ! ಒಂದೇ ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್

SHOCKING: ಮಂಡ್ಯದಲ್ಲಿ ಬೆಚ್ಚಿಬೀಳಿಸುವ ಸತ್ಯ! ಒಂದೇ ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆಯಂತಹ ಪ್ರಕರಣಗಳ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ನಗರದ ಪ್ರತಿಷ್ಠಿತ ಡಯಾಗ್ನೋಸ್ಟಿಕ್ ಸೆಂಟರ್ ಒಂದರ ಮೇಲೆ (Mandya) ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದಾಗ, ಕಳೆದ ಒಂದು ವರ್ಷದಲ್ಲಿ (Shocking) ಬರೋಬ್ಬರಿ 55 ಮಂದಿ ಬಾಲಕಿಯರಿಗೆ ಗರ್ಭಿಣಿ (Crime) ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಈ ಆಘಾತಕಾರಿ ಬೆಳವಣಿಗೆಯಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಬೆಚ್ಚಿಬಿದ್ದಿದೆ.

16 ಸಾವಿರ ಗರ್ಭಿಣಿಯರ ಪೈಕಿ 55 ಮಂದಿ ಅಪ್ರಾಪ್ತರು
ಉಪ ಲೋಕಾಯುಕ್ತರ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ತಾಲೂಕು ಮಟ್ಟದ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ನಗರದ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಮಿಂಚಿನ ದಾಳಿ ನಡೆಸಿದರು. ತಹಸೀಲ್ದಾರ್ ವಿಶ್ವನಾಥ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ತಂಡವು ಮಂಡ್ಯ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಈ ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಲ್ಲಿ ಇಲ್ಲಿ ಸುಮಾರು 16 ಸಾವಿರ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಲಾಗಿದ್ದು, ಅದರಲ್ಲಿ 55 ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಾಗಿದ್ದಾರೆ.

ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿ ಸ್ಕ್ಯಾನಿಂಗ್‌ಗೆ ಬಂದಾಗ ಆ ಮಾಹಿತಿಯನ್ನು ತಕ್ಷಣವೇ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ನೀಡುವುದು ಕಡ್ಡಾಯ. ಒಂದು ವೇಳೆ ಬಾಲಕಿಯರು ವಿವಾಹವಾಗಿದ್ದರೂ ಸಹ, ಅಂತಹ ಪ್ರಕರಣಗಳು ಫೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಆದರೆ ಈ ಡಯಾಗ್ನೋಸ್ಟಿಕ್ ಸೆಂಟರ್‌ನವರು ಕಾನೂನಿನ ಪ್ರಕಾರ ಮಾಹಿತಿ ನೀಡಿದ್ದಾರೆಯೇ ಅಥವಾ ಈ ಸತ್ಯವನ್ನು ಮುಚ್ಚಿಟ್ಟಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.

ದಾಳಿಯ ನೇತೃತ್ವ ವಹಿಸಿದ್ದ ನೋಡಲ್ ಅಧಿಕಾರಿ ಡಾ. ಕೆ. ಸೋಮಶೇಖರ್ ಅವರು ಮಾತನಾಡಿ, ಸ್ಕ್ಯಾನಿಂಗ್ ಸೆಂಟರ್‌ನ ರಿಜಿಸ್ಟರ್ ಮತ್ತು ದಾಖಲೆಗಳನ್ನು ಪರಾಮರ್ಶಿಸಲಾಗುತ್ತಿದೆ. ಬಾಲ ಗರ್ಭಿಣಿಯರ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ಜೊತೆಗೆ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಯಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಪ್ರಕರಣವು ಮಂಡ್ಯ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಥವಾ ಬಾಲ್ಯವಿವಾಹದಂತಹ ಗಂಭೀರ ಸಾಮಾಜಿಕ ಸಮಸ್ಯೆಗಳತ್ತ ಬೆರಳು ಮಾಡಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!