ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಗ್ಯಾರೆಂಟಿ ಕಾರ್ಡ್ ಯೋಜನೆಯ ನಾಲ್ಕನೇ ವಾಗ್ದಾನವನ್ನು ಘೋಷಿಸಿದಾಗಿನಿಂದ ಆ ಯೋಜನೆಯನ್ನು ಟೀಕಸುತ್ತಿರುವ ಬಿಜೆಪಿ ನಾಯಕರ ಸಾಲಿಗೆ ಇಂದು ಶೋಭಾ ಕರಂದ್ಲಾಜೆ ಕೂಡ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‍ನವರು ಜನರನ್ನು ಮರುಳು ಮಾಡಲು, ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ನೀವು 2018ರವರೆಗೆ ಅಧಿಕಾರ ನಡೆಸಿದ್ದೀರಿ. ಆಗ ನೀವು ಒಂದು ಸಮುದಾಯದ ಓಲೈಕೆಗಾಗಿ ಮಾತ್ರ ಯೋಜನೆ ಕೊಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ಸಿನ ಸುಳ್ಳು ಭರವಸೆ ನಂಬಲು ಕರ್ನಾಟಕದ ಜನರು ಮೂರ್ಖರಲ್ಲ. ಕರ್ನಾಟಕದ ಜನರು ವಿದ್ಯಾವಂತರು, ಪ್ರಜ್ಞಾವಂತರು, ಬುದ್ಧಿವಂತರು. ಅವರೆಲ್ಲರೂ ಮಾಧ್ಯಮ ನೋಡುತ್ತಾರೆ; ಸೋಷಿಯಲ್ ಮೀಡಿಯ ಗಮನಿಸುತ್ತಾರೆ; ಯಾವ ರಾಜ್ಯದಲ್ಲಿ ನೀವು ಮೋಸ ಮಾಡಿದ್ದೀರೆಂಬ ಅರಿವು ಅವರಿಗೆ ಇದೆ ಎಂದರು.
2001ರ ಗ್ಯಾರಂಟಿ ಕಾರ್ಡ್, 2013ರ ಗ್ಯಾರಂಟಿ ಕಾರ್ಡ್ ಏನಾಗಿದೆ ಎಂದು ಕಾಂಗ್ರೆಸ್‍ನ್ನು ಜನತೆ ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಯೋಜನೆಗೆ ಬಿಜೆಪಿಯಿಂದ ತೀವ್ರ ಆಕ್ಷೇಪಗಳೇಳುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಯೋಜನೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.