ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಇದೀಗ ಮಹಾಯುತಿ ಸರ್ಕಾರದಲ್ಲಿ ಶಿವಸೇನಾ ಮುಖ್ಯಸ್ಥ ಗೃಹ ಸಚಿವರಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಂತರ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಅವರು ವರ್ಷ ಬಂಗಲೆಯಲ್ಲಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಭೆ ಮುಗಿದ ಕೆಲವೇ ಹೊತ್ತಿನಲ್ಲಿ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 5 ರಂದು ಗುರುವಾರ ಆಜಾದ್ ಮೈದಾನದಲ್ಲಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಕೂಡ ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
#WATCH | Mumbai: Maharashtra CM-designate Devendra Fadnavis arrives at Varsha bungalow to meet Shiv Sena chief Eknath Shinde pic.twitter.com/a8oSaXw51G
— ANI (@ANI) December 4, 2024
ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಅವರು ಗೃಹ ಸಚಿವಾಲಯದ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿಯೇ ಅವರು ʼಮೌನʼದ ಮೂಲಕ ಬಿಜೆಪಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಗೃಹ ಇಲಾಖೆ ಸಿಗದಿದ್ದರೆ ಸರ್ಕಾರಕ್ಕೆ ಸೇರುವುದಿಲ್ಲ ಎಂದೂ ಏಕನಾಥ್ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಏಕನಾಥ್ ಶಿಂಧೆಯವರ ಈ ಹೊಸ ಬೇಡಿಕೆಯು ಬಿಜೆಪಿಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಯಾಕೆಂದರೆ ಗೃಹ ಇಲಾಖೆಯು ಅತ್ಯಂತ ಶಕ್ತಿಶಾಲಿ ಇಲಾಖೆ ಎಂದು ಪರಿಗಣಿಸಲ್ಪಟ್ಟಿದೆ. ಸಿಎಂ ಆದವರು ಈ ಖಾತೆಯನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಾರೆ. ಸದ್ಯ ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುವುದಾಗಿ ಏಕನಾಥ್ ಶಿಂಧೆ ಅವರಿಗೆ ಫಡ್ನವೀಸ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.