ಕನ್ನಡ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಬಳಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿರುವ ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಆಡಿಯೋ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದೆ.
ಈ ಆಡಿಯೋ ನಾಲ್ಕುವರೆ ವರ್ಷಗಳ ಹಿಂದಿನದ್ದು ಎಂದು ಅಶೋಕ್ ಕುಮಾರ್ ಜೈನ್ ಹೇಳಿದ್ದಾರೆ. ಆದರೆ, ಇದನ್ನು ಈಗ ಯಾರು ವೈರಲ್ ಮಾಡಿದ್ದಾರೋ ಗೊತ್ತಿಲ್ಲ. ನಾಲ್ಕು ವರ್ಷಗಳ ಹಿಂದಿ ಆಡಿಯೋ ಇದಾಗಿದ್ದು, ಶಾಸಕರ ಗೆಳೆಯರೊಬ್ಬರಿಗೆ ಕಳಿಸಿದ್ದೆ, ಅಲ್ಲದೆ, ನನ್ನ ಫೋನ್ ಲಾಡ್ಜ್ ಅಲ್ಲಿ ಬಿಟ್ಟು ಹೋಗಿದ್ದೆ, ಯಾರಿಂದ ವೈರಲ್ ಆಗಿದೆಯೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ತಾನು ಆಡಿಯೋ ತಿರುಚಿಲ್ಲ ಎಂದು ಹೇಳಿರುವ ಜೈನ್, ಶಾಸಕರು ಹಾಗೆ ಮಾತನಾಡಿರುವುದು ತಪ್ಪು, ಹಾಗೆ ಮಾತಾಡಬಾರದಿತ್ತು. ಆಡಿಯೋ ತಿರುಚೋ ವಿದ್ಯೆ ನನಗೆ ಗೊತ್ತಿಲ್ಲ, ನಾನು ಕರೆ ಮಾಡಿದಾಗ ಶಾಸಕರು ದಾರಿ ತಪ್ಪಿ ಮಾತಾಡಿದ್ರು, ಬೇಕಿದ್ರೆ ಫೊರೆನ್ಸಿಕ್ ಇಲಾಖೆಗೆ ಕಳಿಸಿ, ಯಾರೋ ರಾಜಕಾರಣದಲ್ಲಿ ಅವರಿಗೆ ಆಗದಿರೋರು ಇದನ್ನು ವೈರಲ್ ಮಾಡಿದ್ದಾರೆ ಎಂದು ಜೈನ್ ಸವಾಲ್ ಹಾಕಿದ್ದಾರೆ.
ಅದಕ್ಕೂ ಮುನ್ನ, ಸ್ಪಷ್ಟನೆ ನೀಡಿದ್ದ ಶಾಸಕ ಪಾಟೀಲ್, ನನಗೆ ಮೋದಿ ಬಗ್ಗೆ ಗೌರವವಿದೆ, ನನ್ನ ಆಡಿಯೋ ಹೌದು, ಆದರೆ, ಅದನ್ನು ತಿರುಚಲಾಗಿದೆ, ಅದನ್ನು ಯಾರು ಎಡಿಟ್ ಮಾಡಿದ್ದಾರೆ, ಎಲ್ಲಿ ಎಡಿಟ್ ಮಾಡಿದ್ದಾರೆ ಅನ್ನುವುದು ನನಗೆ ಗೊತ್ತಿದೆ, ಸಮಯ ಸಂದರ್ಭ ಬಂದಾಗ ಹೇಳ್ತೀನಿ ಎಂದು ಹೇಳಿದ್ರು.