ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಶಿವಮೊಗ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸುಮಾರು 3.94 ಕೋಟಿ ರೂ. ವೆಚ್ಚವಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಮಾಹಿತಿ ಹಕ್ಕಿನ ಅಡಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೀಡಿದ ಮಾಹಿತಿಯಲ್ಲಿ ಈ ವಿಷಯ ಹೊರಬಿದ್ದಿದೆ.
ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಳಸಿದ ವಾಹನ ಸೌಕರ್ಯದ ಬಗ್ಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಮಾಹಿತಿ ಹಕ್ಕು ಕಾಯಿದೆ ನಿಯಮದಡಿ ಪ್ರಶ್ನಿಸಲಾಗಿತ್ತು. ಈಗ ಶಿವಮೊಗ್ಗ ವಿಭಾಗದ ಕ.ರಾ.ರ.ಸಾ ನಿಗಮ ಉತ್ತರ ನೀಡಿದ್ದು, ವಿವಿಧ ತಾಲೂಕುಗಳಿಂದ 1600 ಬಸ್ ಗಳನ್ನು ಒಪ್ಪಂದದ ಮೇರೆಗೆ ನೀಡಲಾಗಿದ್ದು ಇದಕ್ಕೆ ಬರೋಬ್ಬರಿ 3,93,92,565 ರೂ. ವೆಚ್ಚ ತಗುಲಿದೆ ಎಂದು ಹೇಳಲಾಗಿದೆ.
ಈ ಮೊತ್ತವನ್ನು ಶಿವಮೊಗ್ಗದ ಕಾರ್ಯಪಾಲಕ ಎಂಜಿನಿಯರ್ ಪಾವತಿಸಿದ್ದಾರೆ. ಬೇರೆ ಜಿಲ್ಲೆಗಳಿಂದಲೂ ಕಾರ್ಯಕ್ರಮಕ್ಕೆ ನೂರಾರು ಬಸ್‍ಗಳು ಆಗಮಿಸಿದ್ದು, ಅದರ ವೆಚ್ಚ ಪ್ರತ್ಯೇಕವಾಗಿದೆ. ಆ ಮಾಹಿತಿ ಇನ್ನೂ ಹೊರಬಿದ್ದಿಲ್ಲ.