ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಿರಬಹುದು, ಆದರೆ ಅವರು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಸ್ಟ್‌ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಗಬ್ಬರ್ ಸಿಂಗ್ ಎಂದೇ ಖ್ಯಾತರಾಗಿರುವ ಶಿಖರ್ ಧವನ್ ಮೈದಾನದಲ್ಲಿ ಆಡುವಾಗಲೂ ಸಾಕಷ್ಟು ಮಜಾ ಸೃಷ್ಟಿಸುತ್ತಿದ್ದರು. ಈಗ ಮೈದಾನದ ಹೊರಗೆ ಕೂಡ ಮತ್ತೆ ಸುದ್ದಿಯಾಗುತ್ತಿದ್ದಾರೆ.
ಹೌದು. ಉತ್ತರ ಕರ್ನಾಟಕದ ಖ್ಯಾತ ಪವಾಡ ಬಾಬಾ ಲಡ್ಡು ಮುತ್ಯಾರನ್ನು ಅನುಕರಿಸುವ ಧವನ್, ಆಧುನಿಕ ಲಡ್ಡು ಮುತ್ಯಾ ಬಾಬಾನನ್ನು ಕನ್ನಡ ಹಾಡಿನ ಮೂಲಕ ಲೇವಡಿ ಮಾಡಿದ್ದಾರೆ.
ಬಾಗಲಕೋಟೆಯ ನಿಜವಾದ ಪವಾಡ ಬಾಬಾ ಲಡ್ಡು ಮುತ್ಯಾ ಸಾಕಷ್ಟು ಭಕ್ತರನ್ನು ಹೊಂದಿದೆ. ಆದರೆ ಈಗ ಆಧುನಿಕ ಲಡ್ಡು ಮುತ್ಯಾ ಎಂದು ಜನ ಕರೆಯುತ್ತಿರುವ ಮತ್ತೊಬ್ಬ ವ್ಯಕ್ತಿ ತನ್ನ ಕೈಯಿಂದ ತಿರುಗುವ ಫ್ಯಾನನ್ನು ನಿಲ್ಲಿಸಿ ಜನರ ಗಮನ ಸೆಳೆಯುತ್ತಿದ್ದಾನೆ. ಈ ಆಧುನಿಕ ಲಡ್ಡು ಮುತ್ಯಾ ಬಗ್ಗೆ ಶಿಖರ್ ಧವನ್ ವಿಡಿಯೋ ಮೂಲಕ ಗೇಲಿ ಮಾಡಿದ್ದಾರೆ.
View this post on Instagram
ಈ ವೀಡಿಯೋದಲ್ಲಿ ಶಿಖರ್ ಧವನ್ ಕುರ್ಚಿ ಮೇಲೆ ಕೂತಿದ್ದು, ಅವರನ್ನು ಮೂವರು ಎತ್ತುತ್ತಾರೆ. ಆಗ ಧವನ್ ತನ್ನ ಕೈಯಿಂದ ನಿಧಾನವಾಗಿ ತಿರುಗುತ್ತಿದ್ದ ಫ್ಯಾನ್ ಅನ್ನು ನಿಲ್ಲಿಸುತ್ತಾರೆ. ಇದರ ನಂತರ ಅವರು ತನ್ನನ್ನು ಎತ್ತಿಕೊಂಡವರಿಗೆ ಆಶೀರ್ವಾದ ಮಾಡುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಶಿಖರ್ ಧವನ್ ಈ ವಿಡಿಯೋದೊಂದಿಗೆ “ಪಂಖಾ ವಾಲೆ ಬಾಬಾ ಕಿ ಜೈ ಹೋ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಆಧುನಿಕ ಲಡ್ಡು ಮುತ್ಯಾ ತನ್ನ ಕೈಯಿಂದ ತಿರುಗುವ ಫ್ಯಾನ್ ಅನ್ನು ನಿಲ್ಲಿಸಿ ಎಲ್ಲರಿಗೂ ಒಂದೇ ಕೈಯಿಂದ ಆಶೀರ್ವದಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಜನರು ಲಡ್ಡು ಮುತ್ಯಾ ಎಂದು ಹೇಳಿ ಆಶೀರ್ವಾದ ಪಡೆಯುತ್ತಿದ್ದಾರೆ. ಫ್ಯಾನ್ ಮುಟ್ಟಿ ಆಧುನಿಕ ಲಡ್ಡು ಮುತ್ಯಾ ಆಗಲು ಯತ್ನಿಸುತ್ತಿರುವ ಈತ ಯಾರು, ಎಲ್ಲಿಂದ ಬಂದಿದ್ದಾನೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.