Wednesday, December 4, 2024
Homeಟಾಪ್ ನ್ಯೂಸ್SHANKAR NAG : ಅಪರೂಪದ ಪ್ರತಿಭೆ.. ಅನೂಹ್ಯ ಚಿಂತನೆ! : ಶಂಕರ್‌ ನಾಗ್‌ ಬಗ್ಗೆ ಇಂಟರೆಸ್ಟಿಂಗ್...

SHANKAR NAG : ಅಪರೂಪದ ಪ್ರತಿಭೆ.. ಅನೂಹ್ಯ ಚಿಂತನೆ! : ಶಂಕರ್‌ ನಾಗ್‌ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳಿವು

ಶಂಕರ್ ನಾಗ್ ,ಕನ್ನಡಿಗರು ಎಂದೆಂದಿಗೂ ಮರೆಯಲಾಗದ ಮಾಣಿಕ್ಯ. ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ, ಸಿನಿ ಪ್ರೇಮಿಗಳಿಗೆ ಹಲವು ಅಚ್ಚರಿಯಪ್ರಯೋಗ, ವಿಭಿನ್ನತೆಯನ್ನು ತೋರಿಸಿಕೊಟ್ಟ ಮಹಾನ್ ನಟ,ನಿರ್ದೇಶಕ ಮತ್ತು ತಂತ್ರಜ್ಞ.

ಶಂಕರ್ ನಾಗ್ ರನ್ನು ಕನ್ನಡ ಚಿತ್ರರಂಗ ಕಳೆದುಕೊಂಡು 34 ವರ್ಷಗಳೇ ಕಳೆದು ಹೋಗಿದೆ. ಆದ್ರೂ ಇಂದಿಗೂ ಎಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಶಂಕರ್ ನಾಗ್ ಅಚ್ಚಳಿಯದ ಹಾಗೆ ಉಳಿದಿದ್ದಾರೆ. ಇಂದು (ನ.9) ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜನ್ಮ ದಿನ. ಹೀಗಾಗಿ ಅವರ ಕುರಿತ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿಯಬೇಕಿದ್ರೆ ಮುಂದೆ ಓದಿ

ಶಂಕರ್ ನಾಗ್ ಕೇವಲ ಅದ್ಭುತ ನಟ, ನಿರ್ದೇಶಕ ಮಾತ್ರವಲ್ಲ. ಅವರಿಗೆ ಹಲವು ವಾದ್ಯಗಳನ್ನು ನುಡಿಸಲು ಬರುತ್ತಿತ್ತು. ತಬಲಾ, ಹಾರ್ಮೋನಿಯಂ ಮತ್ತು ಕೊಳಲನ್ನು ಸುಲಲಿತವಾಗಿ ನುಡಿಸಲು ಕಲಿತಿದ್ದರು.

ಮಾಲ್ಗುಡಿ ಡೇಸ್ ಸೀರಿಯಲ್ ಇವತ್ತಿಗೂ ಕೂಡ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಸರಣಿಯಾಗಿದೆ. ಭಾರತೀಯ ದೂರದರ್ಶನ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಮಾಲ್ಗುಡಿ ಡೇಸ್ ಮತ್ತು ಸ್ವಾಮಿ ಧಾರಾವಾಹಿಯನ್ನ ಶಂಕರ್ ನಿರ್ದೇಶಿಸಿದ್ದು ಅವರ ವೃತ್ತಿ ಬದುಕಿನ ಸಾರ್ವಕಾಲಿಕ ಶ್ರೇಷ್ಠ ಸಂಗಾತಿಯಾಗಿದೆ.

ಶಂಕರ್ ನಾಗ್ ರಿಗೆ ವಯಕ್ತಿಕ ಜೀವನದಲ್ಲಿ ಕಾರುಗಳ ಮೇಲೆ ಬಹಳ ಆಸಕ್ತಿಯಿತ್ತು. ಯಾವುದೇ ಹೊಸ ಕಾರು ಮಾರುಕಟ್ಟೆಗೆ ಬಂದರೆ ಅವುಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುತ್ತಿದ್ದರು. ಅವರ ಕೆಲ ಸಿನಿಮಾಗಳಲ್ಲೂ ಕೂಡ ಅವರ ಕಾರಿನ ಪ್ರೇಮವನ್ನು ಕಾಣಬಹುದು.

ಶಂಕರ್ ನಾಗ್ ಅಂದ್ರೆ ಪಾದರಸ. ಅಷ್ಟರ ಮಟ್ಟಿಗೆ ಶಂಕರಣ್ಣ ಸದಾ ಕ್ರಿಯಾಶೀಲವಾಗಿರುತ್ತಿದ್ದರು. ಒಂದು ಘಳಿಗೆಯನ್ನು ವ್ಯರ್ಥ ಮಾಡದೆ ಸದಾ ಒಂದಿಲ್ಲೊಂದು ವಿಷಯಗಳಲ್ಲಿ ತಮ್ಮ ತಾವು ತೊಡಗಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರ ಕಾರ್ ಒಂದು ಚಲಿಸುವ ಮನೆಯಂತಿತ್ತು ಎಂದು ಹಲವರು ಹೇಳುತ್ತಾರೆ.

ಶಂಕರ್ ನಾಗ್ ಅಪ್ಪಟ ರಂಗಭೂಮಿಯ ಪ್ರತಿಭೆಯಾಗಿದ್ದರೂ, ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಮಾಡಬಲ್ಲ ಸಾಮರ್ಥ್ಯವಿದ್ದರೂ ಅವರ ಸಂಪೂರ್ಣ ಆಸಕ್ತಿ ಮಾತ್ರ ನಿರ್ದೇಶನಕ್ಕೆ ಹೆಚ್ಚು ಒತ್ತು ನೀಡುವುದಾಗಿತ್ತು. ಇಂದಿಗೂ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲಿ ಶಂಕರ್ ನಾಗ್ ಅಗ್ರಮಾನ್ಯರು.

ಕೇವಲ ಸಿನಿಮಾ ವಿಚಾರ ಮಾತ್ರವಲ್ಲದೆ, ಮಾಹಿತಿ, ತಂತ್ರಜ್ಞಾನ, ಭವಿಷ್ಯ ಎಲ್ಲದರ ಬಗ್ಗೆಯೂ ಶಂಕರ್ ನಾಗ್ ಅಪಾರ ತಿಳುವಳಿಕೆ ಹೊಂದಿದ್ದರು. ಇಂದಿಗೆ ನಾವು ಬೆಂಗಳೂರಿನಲ್ಲಿ ನೋಡುವ ನಮ್ಮ ಮೆಟ್ರೋ ಆಲೋಚನೆಗಳನ್ನು ಶಂಕರ್ ನಾಗ್ 30 ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು.

ಹಲವು ದೇಶಗಳನ್ನು ಸುತ್ತಿದ ಅವರು, ಸಮಾನ ಮನಸ್ಕರು ಒಂದೆಡೆ ಕಲೆತು ವಿಷಯಗಳನ್ನು ಚರ್ಚಿಸುವ ಬಗೆ ಹಲವು ಅಭಿವೃದ್ಧಿಗಳಿಗೆ ಮೂಲ ಎಂದು ಅರಿತು ಈ ಪರಿಯನ್ನು ಕನ್ನಡದ ನೆಲದಲ್ಲಿ ಪ್ರಾರಂಭಿಸಿದ್ದರು.ಅವರ ಫಾರ್ಮ್ ಹೌಸ್ ಒಂದರಲ್ಲಿ ಕಂಟ್ರಿ ಕ್ಲಬ್ ಹೆಸರಿನಲ್ಲಿ ಒಂದು ವೇದಿಕೆಯನ್ನು ಕೂಡ ಸ್ಥಾಪಿಸಿದ್ದರು.

ಶಂಕರ್ ವೃತ್ತಿ ಬದುಕಿಗೆ ಮರಾಠಿ ರಂಗಭೂಮಿ ಹೇಗೆ ತಿರುವು ನೀಡ್ತೋ, ಹಾಗೇ ವೈಯಕ್ತಿಕ ಬದುಕಲ್ಲೂ ಶಂಕರ್ ಗೆ ಅರುಂಧತಿಯನ್ನ ಕೊಡುಗೆಯಾಗಿ ನೀಡಿದ್ದು ಇದೇ ಮರಾಠಿ ರಂಗಭೂಮಿ. ತಮ್ಮಂತೆಯೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅರುಂಧತಿಯವರ ಕೈ ಹಿಡಿದರು.

ಶಂಕರ್ ನಾಗ್ ಕೇವಲ ಸಿನಿಮಾ ಆಲೋಚನೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರಿಗೆ ಅಪಾರವಾದ ಬಡವರ, ಮಧ್ಯಮ ವರ್ಗದವರ ಮೇಲೆ ಕಾಳಜಿಯಿತ್ತು. ಹೀಗಾಗಿ ಈ ವರ್ಗದ ಜನರಿಗೆ ಕೇವಲ 8 ದಿನದಲ್ಲಿ ಮನೆ ಕಟ್ಟುವ ಯೋಜನೆಯನ್ನು ಆಲೋಚಿಸಿದ್ದರು. ಆ ಕಾಲಕ್ಕೆ ಇದು ಕಲ್ಪನೆಗೂ ನಿಲುಕದ್ದಾಗಿತ್ತು.

ಅಂದು ರಾತ್ರಿ ಕಂಟ್ರಿ ಕ್ಲಬ್ ನಿಂದ ಶಂಕರ್ ನಾಗ್ ಹೊರಡುವಾಗ ಸಹೋದರ ಅನಂತ್ ನಾಗ್ ಅವರನ್ನು ಹಲವು ಬಾರಿ ತಡೆದಿದ್ದರಂತೆ. ಆದ್ರೂ ಅನಿವಾರ್ಯವಾಗಿ ಹೋಗಲೇಬೇಕಿದೆ ಎಂದು ಮನವೊಲಿಸಿ ಶಂಕರಣ್ಣ ಅಲ್ಲಿಂದ ಹೊರಟವರು, ಭೀಕರ ಅಪಘಾತದಲ್ಲಿ ಕನ್ನಡಿಗರನ್ನು ಬಿಟ್ಟು ಹೊರಟೇಬಿಟ್ಟರು. ಆದ್ರೆ ಇಂದಿಗೂ ಪ್ರತಿಯೊಬ್ಬ ಕನ್ನಡಿಗನಲ್ಲಿ ಶಂಕರ್ ನಾಗ್ ಹಚ್ಚ ಹಸಿರಾಗಿಯೇ ಉಳಿದಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!