ಹೆಣ್ಣು ಮಕ್ಕಳೊಡನೆ ಅಶ್ಲೀಲವಾಗಿ ಮಾತನಾಡುವುದು ಮತ್ತು ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದ ಶಾಲಾ ಶಿಕ್ಷಕನನ್ನು ಗ್ರಾಮಸ್ಥರೇ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ತುಮಕೂರಿನ ಬೋರಕುಂಟೆ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ಮಂಜುನಾಥ್ ಬಂಧಿತ ಆರೋಪಿ.
ಕಳೆದ ಆರು ವರ್ಷಗಳಿಂದ ಮಧುಗಿರಿ ತಾಲೂಕಿನ ಬೋರಗುಂಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಕೆಲವು ಹೆಣ್ಣುಮಕ್ಕಳೊಡನೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಆರೋಪ ಕೇಳಿಬಂದಿತ್ತು. ಹೆಣ್ಣು ಮಕ್ಕಳ ಅಂಗಾಂಗವನ್ನು ಸ್ಪರ್ಶಿಸುವುದು, ಕಪಿಚೇಷ್ಟೆಯ ವರ್ತನೆ, ಅಸಭ್ಯ ಮಾತಿನಿಂದಾಗಿ ಮಕ್ಕಳು ಬೇಸತ್ತಿದ್ದರು.
ಈ ಬಗ್ಗೆ ಪುಕಾರುಗಳು ಹೆಚ್ಚಾದಾಗ ಗ್ರಾಮಸ್ಥರು ಒಟ್ಟಾಗಿ ದಾಂಗುಡಿಯಿಟ್ಟು, ಶಿಕ್ಷಕನಿಗೆ ಧರ್ಮದೇಟು ಕೊಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆರೋಪಿಯ ವಿರುದ್ಧ ಪೊಲೀಸರು ಪೊಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.