ಬೆಂಗಳೂರು: ದೂರು ನೀಡಲೆಂದು ಪೊಲೀಸ್ ಠಾಣೆಗೆ ಹೋದರೆ, ಸ್ವತಃ ಪೊಲೀಸ್ ಅಧಿಕಾರಿಯೇ ಮಹಿಳೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಗರದ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಏ. 8 ರಂದು ನಡೆದಿರುವ ಈ ಘಟನೆಯ ಬಗ್ಗೆ ಸ್ವತಃ ಸಂತ್ರಸ್ತ ಮಹಿಳೆ ಟ್ವಿಟರ್ ಮುಖಾಂತರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.
ಈ ಬಗ್ಗೆ ಟ್ವಿಟರ್ ಮೂಲಕ ದೂರಿರುವ ಶೀತಲ್ ಸುಸಾನ್ ಅಬ್ರಹಾಮ್ ಎಂಬ ಮಹಿಳೆ, ತನ್ನ ಗೆಳತಿಯ ಸೋದರಿನಿಗೆ ಸಂಬಂಧಿಸಿದ ವಿಚ್ಛೇದನ ಪ್ರಕರಣವೊಂದರಲ್ಲಿ ನಾನು ಸಾಕ್ಷಿಯಾಗಿ ಹೋಗಿದ್ದೆ. ಮೊದಲು ಸಭ್ಯವಾಗಿಯೇ ವರ್ತಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿ ಎಂಬಾತ ಬಳಿಕ ತನ್ನ ನಿಜಬಣ್ಣ ತೋರಿಸಲಾರಂಭಿಸಿದ. ಮೈಕೈ ಮುಟ್ಟುವುದು, ಕೈಕುಲುವುದು ಮಾಡಿದ ಬಳಿಕ ನನ್ನ ಪೋನ್ ನಂಬರ್ ಕೇಳಿ ತೆಗೆದುಕೊಂಡ, ಬಳಿಕ ಮತ್ತೊಂದು ರೀತಿಯ ಹಿಂಸೆ ಶುರುವಾಯಿತು ಎಂದಿದ್ದಾಳೆ.
ರಾತ್ರಿ ಹನ್ನೆರಡು ಗಂಟೆಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್‌ಗಳನ್ನು ಮಹಿಳೆ ಲಗತ್ತಿಸಿದ್ದು, ಪೊಲೀಸ್ ಇಲಾಖೆಯ ಈ ಕೊಳಕುಗಳನ್ನು ಕಿತ್ತುಹಾಕಬೇಕಿದೆ ಎಂದು ಮಹಿಳೆ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಈ ರೀತಿಯ ಘಟನೆ ಸಂಭವಿಸಿದಾಗ ನಾನು ಏನು ಮಾಡಬೇಕೆಂದೇ ತೋಚಲಿಲ್ಲ. ಮಾನಸಿಕವಾಗಿ ತೀವ್ರ ಆಘಾತವಾಯಿತು. ಈ ಘಟನೆಯಿಂದ ಹೇಗೆ ಹೊರಬರಬೇಕೆಂದೇ ನನಗೆ ತಿಳಿಯಲಿಲ್ಲ. ದೂರಿನ ಬಗ್ಗೆ ವಿಚಾರಿಸಲು ಪೊಲೀಸ ಠಾಣೆಗೆ ತೆರಳಲೂ ಸಹ ನನಗೆ ಭಯವಾಗುತ್ತಿದೆ. ದಯವಿಟ್ಟು ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.