ಅಂಕೋಲಾ: ಭಾರೀ ಗಾಳಿ ಮತ್ತು ಮಳೆಯ ಪರಿಣಾಮ ದೇವಸ್ಥಾನದ ಆವರಣದಲ್ಲಿ ಜನರು ನಿಂತಿದ್ದ ತಗಡಿನ ಶೆಡ್ ಮೇಲೆ ಮರ ಬಿದ್ದು 7 ಭಕ್ತರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಸಂಜೆ 7.30ರ ಸುಮಾರಿಗೆ ಬಾಳಾಪುರ ತಾಲೂಕಿನ ಪಾರಸ್ ಗ್ರಾಮದ ಬಾಬೂಜಿ ಮಹಾರಾಜರ ದೇವಸ್ಥಾನದಲ್ಲಿ ಮಹಾ ಆರತಿಗೆ ಜನರು ಸೇರಿದ್ದ ವೇಳೆ ಈ ಘಟನೆ ನಡೆದಿದೆ.
ಭಾರೀ ಗಾಳಿ ಮತ್ತು ಮಳೆಯಿಂದಾಗಿ 100 ವರ್ಷ ಹಳೆಯದಾದ ಮರವೊಂದು ಟಿನ್ ಶೆಡ್ ಮೇಲೆ ಬಿದ್ದಿದ್ದು, ಅದರ ಅಡಿಯಲ್ಲಿ ಸುಮಾರು 40 ಜನರು ನಿಂತಿದ್ದರು ಎಂದು ಜಿಲ್ಲಾಡಳಿತ ತಿಳಿಸಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಹಲವರನ್ನು ರಕ್ಷಿಸಿದ್ದಾರೆ.