ಲಂಡನ್: ಯುಕೆಯ(UK) ಕೇಂಬ್ರಿಡ್ಜ್‌ಶೈರ್‌ನಲ್ಲಿರುವ ಹಿಂದೂ ಸಮುದಾಯಕ್ಕೆ(Hindu community) ಅಲ್ಲಿನ ಸ್ಥಳೀಯ ಆಡಳಿತ ಭಾರಿ ಆಘಾತ ನೀಡಿದೆ. ಈ ಭಾಗದ ಮೊದಲ ಹಿಂದೂ ದೇವಾಲಯವನ್ನು(Temple) ನಿರ್ಮಿಸಬೇಕೆಂಬ ಭಾರತೀಯ ಮೂಲದವರ ದಶಕಗಳ ಕನಸಿಗೆ ಅಡ್ಡಿಯಾಗಿದ್ದು, ಧಾರ್ಮಿಕ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಚರ್ಚ್ ನೆಟ್‌ವರ್ಕ್‌ಗೆ ಹಸ್ತಾಂತರಿಸಲು ಸ್ಥಳೀಯ ಮಂಡಳಿ ನಿರ್ಧರಿಸಿದೆ.
999 ವರ್ಷಗಳ ಕಾಲ ಚರ್ಚ್ ನೆಟ್‌ವರ್ಕ್‌ಗೆ ಗುತ್ತಿಗೆ
ತ್ವರಿತ ಜನಸಂಖ್ಯೆಯ ಬೆಳವಣಿಗೆಯನ್ನು ಕಾಣುತ್ತಿರುವ ನಾರ್ತ್‌ಸ್ಟೋ ಪಟ್ಟಣದಲ್ಲಿ ಈ ಬೆಳವಣಿಗೆ ನಡೆದಿದೆ. ದಕ್ಷಿಣ ಕೇಂಬ್ರಿಡ್ಜ್‌ಶೈರ್ ಜಿಲ್ಲಾ ಮಂಡಳಿಯು ಸುಮಾರು 0.25 ಹೆಕ್ಟೇರ್ ಭೂಮಿಯನ್ನು ನಾರ್ತ್‌ಸ್ಟೋ ಚರ್ಚ್ ಜಾಲಕ್ಕೆ (NCN) 999 ವರ್ಷಗಳ ಕಾಲ ಅತ್ಯಂತ ಕಡಿಮೆ ಬಾಡಿಗೆಗೆ (ಪೆಪ್ಪರ್‌ಕಾರ್ನ್ ಬಾಡಿಗೆ) ಗುತ್ತಿಗೆ ನೀಡಲು ಮುಂದಾಗಿದೆ. ವಿಶೇಷವೆಂದರೆ, ಈ ಯೋಜನೆಯಲ್ಲಿ ಮುಸ್ಲಿಂ ಸಂಘಟನೆಯೂ ಪಾಲುದಾರನಾಗಿದ್ದು, ಪ್ರಾರ್ಥನೆ ಮತ್ತು ಧಾರ್ಮಿಕ ಶಿಕ್ಷಣಕ್ಕಾಗಿ ಅಲ್ಲಿ ಪ್ರತ್ಯೇಕ ಸ್ಥಳವನ್ನು ಒದಗಿಸಲಾಗುತ್ತಿದೆ.
ಹಿಂದೂ ಸಂಘಟನೆಯ ಪ್ರಸ್ತಾವನೆ ತಿರಸ್ಕರಿಸಿದ ಕೌನ್ಸಿಲ್
ಸ್ಥಳೀಯ ಹಿಂದೂ ಕುಟುಂಬಗಳಿಂದ ರಚಿಸಲ್ಪಟ್ಟ ‘ಹಿಂದೂ ಸಮಾಜ ನಾರ್ತ್‌ಸ್ಟೋ’ (HSN) ಸಂಸ್ಥೆಯು ಸಹ ಇದೇ ಭೂಮಿಗಾಗಿ ಅರ್ಜಿ ಸಲ್ಲಿಸಿತ್ತು. ಎಲ್ಲಾ ಸಮುದಾಯಗಳ ಜನರಿಗೆ ಮುಕ್ತವಾಗಿರುವ ಒಂದು ಸುಂದರ ಹಿಂದೂ ದೇವಸ್ಥಾನ, ಅಂತರ್ಧರ್ಮೀಯ ಕೇಂದ್ರ ಮತ್ತು ಕ್ಷೇಮ ಕೇಂದ್ರವನ್ನು (Wellness Centre) ನಿರ್ಮಿಸಲು ಸಂಸ್ಥೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿತ್ತು. ಆದರೆ ಕೌನ್ಸಿಲ್‌ನ ಮೌಲ್ಯಮಾಪನ ಸಮಿತಿಯು ಚರ್ಚ್ ನೆಟ್‌ವರ್ಕ್‌ನ ಪ್ರಸ್ತಾವನೆಗೆ ಶೇ. 81 ರಷ್ಟು ಅಂಕ ನೀಡಿದರೆ, ಹಿಂದೂ ಸಂಘಟನೆಯ ಪ್ರಸ್ತಾವನೆಗೆ ಶೇ. 65 ರಷ್ಟು ಮಾತ್ರ ನೀಡಿದೆ. ಇದರ ಆಧಾರದ ಮೇಲೆಯೇ ಭೂಮಿಯನ್ನು ಚರ್ಚ್‌ಗೆ ನೀಡಲು ತೀರ್ಮಾನಿಸಲಾಗಿದೆ.
‘ಇಡೀ ಕೌಂಟಿಯಲ್ಲಿ ಒಂದೇ ಒಂದು ಹಿಂದೂ ದೇವಾಲಯವಿಲ್ಲ’
ಕೇಂಬ್ರಿಡ್ಜ್‌ಶೈರ್‌ನಲ್ಲಿ ಸದ್ಯ ಒಂದೇ ಒಂದು ಹಿಂದೂ ದೇವಾಲಯವೂ ಇಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಸಣ್ಣ ಹಬ್ಬಗಳು ಅಥವಾ ಧಾರ್ಮಿಕ ಆಚರಣೆಗಳಿಗೂ ಜನರು ಗಂಟೆಗಟ್ಟಲೆ ದೂರವಿರುವ ಬರ್ಮಿಂಗ್ಹ್ಯಾಮ್ ಅಥವಾ ವೆಂಬ್ಲಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಬಾಡಿಗೆಗೆ ಸಿಗುವ ಸಮುದಾಯ ಭವನಗಳು ರಾತ್ರಿಯಿಡೀ ಲಭ್ಯವಿರುವುದಿಲ್ಲ. ಇದರಿಂದಾಗಿ ಮಹಾಶಿವರಾತ್ರಿ, ಗಣೇಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ದೇವತೆಗಳ ವಿಗ್ರಹಗಳನ್ನು ಜನರ ಮನೆಗಳಲ್ಲಿ ಅಥವಾ ಗ್ಯಾರೇಜ್‌ಗಳಲ್ಲಿ ಚೀಲಗಳಲ್ಲಿ ಇಡಬೇಕಾದ ಪರಿಸ್ಥಿತಿ ಇದೆ ಎಂದು ಸಮುದಾಯದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸಾಂಸ್ಕೃತಿಕ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತಂಕ
ಕೌನ್ಸಿಲ್‌ನ ಈ ನಡೆಗೆ ಹಿಂದೂ ಸಮಾಜ ನಾರ್ತ್‌ಸ್ಟೋವ್‌ನ ಅಧ್ಯಕ್ಷೆ ಅಪರ್ಣಾ ನಿಗಮ್-ಸಕ್ಸೇನಾ ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ. ಅರ್ಜಿ ಸಲ್ಲಿಸುವಾಗ ಆರ್ಥಿಕ ಮತ್ತು ತಾಂತ್ರಿಕ ಅಂಶಗಳಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಕೌನ್ಸಿಲ್ ಸ್ಪಷ್ಟಪಡಿಸಿರಲಿಲ್ಲ ಎಂದಿರುವ ಅವರು, ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿದ್ದಾರೆ.
ಬ್ರಿಟನ್‌ನಲ್ಲಿ ಬೆಳೆಯುತ್ತಿರುವ ಹಿಂದೂ ಪೀಳಿಗೆ ಕ್ರಮೇಣ ತಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಸಂಪ್ರದಾಯಗಳಿಂದ ದೂರ ಸರಿಯುತ್ತಿದೆ ಎಂಬ ಆತಂಕ ಪೋಷಕರನ್ನು ಕಾಡತೊಡಗಿದೆ. ಭಾರತದಿಂದ ಬ್ರಿಟನ್‌ಗೆ ವಲಸೆ ಬಂದಿರುವ ಕುಟುಂಬಗಳು, ತಮ್ಮ ಮಕ್ಕಳು ಇಲ್ಲಿ ಹಬ್ಬಗಳ ಸಂಭ್ರಮವನ್ನೇ ಕಾಣದಂತಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬೇಡಿಕೆಯನ್ನು ಸಮರ್ಥಿಸಿಕೊಂಡ ಮುಸ್ಲಿಂ ಸಂಘಟನೆ ಮತ್ತು ಚರ್ಚ್
ಮತ್ತೊಂದೆಡೆ, ನಾರ್ತ್‌ಸ್ಟೋವ್ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಜವಾದ್ ನವಾಶ್ ಮಾತನಾಡಿ, ನಗರದಲ್ಲಿ ಸುಮಾರು 200 ಮುಸ್ಲಿಂ ಕುಟುಂಬಗಳಿದ್ದು, ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಲು ಶಾಶ್ವತ ಸ್ಥಳದ ಅಗತ್ಯವಿರುವುದರಿಂದ ಈ ಯೋಜನೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಇತ್ತ ಕೌನ್ಸಿಲ್ ತನಗಿರುವ ಹಕ್ಕನ್ನು ಸಮರ್ಥಿಸಿಕೊಂಡಿದ್ದು, ಎಲ್ಲಾ ಅರ್ಜಿಗಳನ್ನು ಪೂರ್ವನಿರ್ಧರಿತ ಮಾನದಂಡಗಳು, ಆರ್ಥಿಕ ಸಾಮರ್ಥ್ಯ ಮತ್ತು ಅಗತ್ಯತೆಗಳ ಆಧಾರದ ಮೇಲೆಯೇ ನ್ಯಾಯಯುತವಾಗಿ ಪರಿಶೀಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸಂಕೀರ್ಣ ನಿರ್ಮಾಣವಾದ ಬಳಿಕ ನಿಯಮಗಳನ್ನು ಪಾಲಿಸುವ ಇತರೆ ಧಾರ್ಮಿಕ ಸಂಸ್ಥೆಗಳಿಗೂ ಚಟುವಟಿಕೆ ನಡೆಸಲು ಸ್ಥಳಾವಕಾಶ ನೀಡುವುದಾಗಿ ಚರ್ಚ್ ನೆಟ್‌ವರ್ಕ್ ಭರವಸೆ ನೀಡಿದೆ.
ಇದನ್ನೂ ಓದಿ : ಆಕಾಶದಲ್ಲೇ ಅಮೆರಿಕದ ನಕ್ಷೆ ಎಂದು ಬರೆದ ಪೈಲಟ್ – ವಿಡಿಯೋ ವೈರಲ್!- VIDEO