ಬೆಂಗಳೂರು : ಮೋದಿ ಸರ್ಕಾರ ಮನ್ರೇಗಾ ಬದಲಿಗೆ ಜಿ ರಾಮ್ ಜಿ ಕಾನೂನು ತಂದು, ಸಾಲು ಸಾಲು ಬದಲಾವಣೆ ಮಾಡಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ (Congress) ಕೆರಳಿ ಕೆಂಡವಾಗಿದೆ. ಇದೇ ವಾರ ಬೆಂಗಳೂರಲ್ಲಿ ಬೃಹತ್ ಸಮಾವೇಶ ನಡೆಸಿ ಕೈ ಪಡೆ ಆಕ್ರೋಶ ಹೊರಹಾಕಿತ್ತು. ಆದ್ರೀಗ ಸಿದ್ದು ಸರ್ಕಾರ ಹೊಸ ವಿವಾದದಲ್ಲಿ ಸಿಲುಕಿದೆ. ಜಾಹೀರಾತಿನಲ್ಲಿ ಮಹಾತ್ಮಾ ಗಾಂಧಿ ಫೋಟೋ ಇದೆ. ಅದರ ಮುಂದೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ್ ಖರ್ಗೆ ಫೋಟೋ ಇದ್ಯಾ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸದನದಲ್ಲಿ (Session) ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶ ಮಾಡಿ, ಅದರಲ್ಲಿ ಹೆಸರು ಇದೆ ಓದಿ ಹೇಳಿ ಎಂದು ಪ್ರಿಯಾಂಕ್ ಸವಾಲು ಹಾಕಿದರು.
ಸರ್ಕಾರದಿಂದ ಮನರೇಗಾ ಜಾಹೀರಾತು ನೀಡಿದಕ್ಕೆ ಕೇಸರಿ ಪಾಳಯ ಕೆರಳಿ ಕೆಂಡವಾಗಿದೆ. ಯಾರಪ್ಪನ ಮನೆ ದುಡ್ಡು ಎಂದು ಜಾಹೀರಾತು ಹಾಕಿದ್ದೀರಿ ಎಂದು ವಿಧಾನಸಭೆಯಲ್ಲಿ ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಜಾಹೀರಾತು ಕೊಡಿ, ತೆರಿಗೆ ಹಣದಲ್ಲಿ ಅಲ್ಲ ಎಂದು ಯತ್ನಾಳ್ ಕಿಡಿಕಾರಿದ್ರು.
ಪರಸ್ಪರ ಮಾತಿನಲ್ಲಿ ಕಾಲೆಳೆದುಕೊಂಡ ನಾಯಕರು
ಜಾಹೀರಾತಿನಲ್ಲಿ ರಾಹುಲ್ ಗಾಂಧಿ ಹೆಸರು ಇಲ್ಲ. ಬದಲಾಗಿ ಸಂಘಪ್ಪ ಎಂದು ಇದೆ ಎಂದು ಪ್ರಿಯಾಂಕ್ ಕಾಲೆಳೆದರು. ಈ ವೇಳೆ ಎಂಟ್ರಿಯಾಗಿ ಸರ್ಕಾರದ ಕಾಳೆಲೆದ ಬಸನಗೌಡ ಪಾಟೀಲ್ ಯತ್ನಾಳ್ “ಸಂಘಪ್ಪ” ಎಂದು ಮಂಗಪ್ಪನವರು ಜಾಹೀರಾತು ಕೊಟ್ಟಿದ್ದಾರೆ ಎಂದರು.
ತಪ್ಪು ಮಾಹಿತಿ ಎಂದ ವಿಜಯೇಂದ್ರ
“ಕಾಂಗ್ರೆಸ್ ಪಕ್ಷ ಕೊಟ್ಟರೆ ತಕರಾರು ಇರುತ್ತಿರಲಿಲ್ಲ. ಜಾಹೀರಾತು ತಪ್ಪು ಮಾಹಿತಿ ನೀಡಲಾಗಿದೆ. ಗ್ರಾಮ ಪಂಚಾಯತಿನಲ್ಲಿ ತೀರ್ಮಾನ ಆಗಬೇಕು ಎಂದು ಕಾಯ್ದೆಯಲ್ಲಿದೆ. ಈ ಜಾಹೀರಾತು ಅರಾಜಕತೆ ಸೃಷ್ಟಿ ಮಾಡುತ್ತಿದೆ. ಜನರನ್ನು ಎತ್ತಿಕಟ್ಟುವ ಜಾಹೀರಾತು ಇದು” ಎಂದು ಬಿಜೆಪಿ ಸದಸ್ಯ ಬಿವೈ ವಿಜಯೇಂದ್ರ ಆರೋಪಿಸಿದರು.
ಸರ್ಕಾರ ಸಮರ್ಥನೆ
‘ಗುಜರಾತ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಜಾಹೀರಾತು ಕೊಟ್ಟಿದೆ. ಇದು ಜನರ ತೆರಿಗೆ ಹಣದಿಂದ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಮೋದಿ ಜಿ ಎಂದು ಹಿಂದಿನ ಬಿಜೆಪಿ ಸರ್ಕಾರ ಜಾಹೀರಾತು ಕೊಟ್ಟಿತ್ತು. ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ ಪರ ಬಿಜೆಪಿ ಸಂಸದರು ಮಾತನಾಡುತ್ತಾರೆ. ಇದು ಯಾವ ರೀತಿಯಲ್ಲಿ ಗಾಂಧೀಜಿಗೆ ನೀಡುವ ಗೌರವ’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಪ್ರಿಯಾಂಕ್ ಮಾತಿನಿಂದ ಕೆರಳಿದ ಬಿಜೆಪಿ, ಜೆಡಿಎಸ್ ನಾಯಕರು ಸಭಾತ್ಯಾಗ ಮಾಡಿದರು.
ಜಾಹೀರಾತುಗಳಿಗೆ ಕೋಟಿ ಕೋಟಿ ಖರ್ಚು
ಸಿದ್ದರಾಮಯ್ಯ ಸರ್ಕಾರ ಇವತ್ತು ಮನ್ರೇಗಾ ಕುರಿತು ಜಾಹೀರಾತು ನೀಡಿದೆ. ಅದನ್ನು ಕಂಡು ವಿಪಕ್ಷ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಸುಖಾ ಸುಮ್ಮನೇ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಭರ್ಜರಿ ಜಾಹೀರಾತು ಕೊಟ್ಟಿದ್ದು ವಿಪಕ್ಷ ನಾಯಕರ ಕಣ್ಣು ಕೆಂಪಾಗಿಸಿದೆ. ಆದರೂ ಸರ್ಕಾರ ಕ್ಯಾರೆ ಎನ್ನಲಿಲ್ಲ.
ಇದನ್ನೂ ಓದಿ: ವಿಧಾನಮಂಡಲ ಜಂಟಿ ಅಧಿವೇಶನ ಫೆಬ್ರವರಿ 4ರವರೆಗೆ ವಿಸ್ತರಣೆ