2023 ರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಲಿಂಗಾಯತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗಾಯತ ವೋಟ್ ಬ್ಯಾಂಕ್ ಅನ್ನು ಮೀರಿ ಪಕ್ಷವನ್ನು ಗಟ್ಟಿಪಡಿಸಬೇಕೆಂದು ಸಂಘನಿಷ್ಠ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಿಟಿ ರವಿಯವರು ಲಿಂಗಾಯತರ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ತೀವ್ರ ಆಕ್ರೋಶವನ್ನು ಎದುರಿಸಿದ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಲಿಂಗಾಯತ ಮುಖ್ಯಮಂತ್ರಿಯನ್ನು ಮಾಡುವುದಿಲ್ಲ, ಬದಲಾಗಿ ಸಂತೋಷ್ ಅಥವಾ ಪ್ರಹ್ಲಾದ್ ಜೋಷಿಯನ್ನು ಸಿಎಂ ಮಾಡಲಾಗುತ್ತದೆ ಎಂದು ಎಂ ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು “ಬಿಎಸ್ ಯಡಿಯೂರಪ್ಪ ಅವರು ಮನಸ್ಪೂರ್ತಿಯಾಗಿ ಬಿಜೆಪಿ ಗೆಲ್ಲಬೇಕೆಂದು ಎಲ್ಲೂ ಹೇಳುತ್ತಿಲ್ಲ. ಒಂದು ಬಾರಿ ಸೋತರೂ ಪರ್ವಾಗಿಲ್ಲ, ಲಿಂಗಾಯತರು ಇಲ್ಲದೆಯೇ ಗೆಲ್ಲಬೇಕೆಂದು ಬಿಎಲ್ ಸಂತೋಷ್ ಹೇಳಿದ್ದಾರೆ. ಲಿಂಗಾಯತ ಹಿಡಿತದಿಂದ ಪಕ್ಷವನ್ನು ಹೊರತರಬೇಕು ಎಂದು ಪ್ಲ್ಯಾನ್ ಮಾಡಲಾಗ್ತಿದೆ. ಈ ಆಧಾರದ ಮೇಲೆಯೇ ಸಿಟಿ ರವಿ ಲಿಂಗಾಯತರ ಮತ ಬಿಜೆಪಿಗೆ ಅಗತ್ಯ ವಿಲ್ಲ ಎಂದು ಹೇಳಿರುವುದಾಗಿ ಲಕ್ಷಣ್ ಹೇಳಿದ್ದಾರೆ.