ಆನೇಕಲ್ : ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 12ಕ್ಕೂ ಹೆಚ್ಚು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮ ಮೂವರು ಸಾವನ್ನಪ್ಪಿದ್ದರೆ, 7ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಆನೇಕಲ್ ನ ಕುರುಬರಪಳ್ಳಿ ಬಳಿ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದರಿಂದ ವಾಹನಗಳು ನಿಧಾನವಾಗಿ ಸಾಗುತ್ತಿದ್ದವು. ಈ ವೇಳೆ ಹಿಂದಿನಿಂದ ರಭಸವಾಗಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಮುಂದೆ ಸಾಗುತ್ತಿದ್ದ ಸುಮಾರು 12ಕ್ಕೂ ಹೆಚ್ಚು ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ಜನ ಸಾವನ್ನಪ್ಪಿದ್ದರೆ, 7ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದಾರೆ.
ಘಟನೆಯಿಂದಾಗಿ ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಸ್ಥಗಿತವಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಸ್ಐಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಸೂಸೈಡ್ ಮಾಡಿಕೊಂಡಿರುವ ಪಿಎಸ್ಐ ಅನ್ನು ಕೀರಪ್ಪ ಟಕಾಂಬ್ಳೆ (54) ಎಂದು ಗುರುತಿಸಲಾಗಿದೆ. ಸಮವಸ್ತ್ರದಲ್ಲೇ ಅವರು ನೇಣಿಗೆ ಶರಣಾಗಿದ್ದಾರೆಂದು ಕಾರಣ ಮಾತ್ರ ಸದ್ಯಕ್ಕೆ ನಿಗೂಢವಾಗಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರಾದ ಘಟಕಾಂಬ್ಳೆಯವರು ಶಿರಸಿ ಮಾರುಕಟ್ಟೆಯ ಠಾಣೆಯ ಎಎಸ್ಐಯಾಗಿದ್ದರು. ಇತ್ತೀಚೆಗಷ್ಟೇ ಬಡ್ತಿ ಪಡೆದು ಪಿಎಸ್ಐ ಆಗಿದ್ದರು.
ಕಳೆದ ಐದು ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದರು. ಬಂಟ್ವಾಳದ ತನಿಖಾ ವಿಭಾಗದಲ್ಲಿ ಪಿಎಸ್ಐ ಆಗಿ ಮುಂಬಡ್ತಿ ಪಡೆದಿದ್ದು, ಇದೀಗ ಬಂಟ್ವಾಳ ನಗರದ ಬಾಡಿಗೆ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.