Thursday, July 10, 2025
Homeಟಾಪ್ ನ್ಯೂಸ್ಬಿಜೆಪಿ ಹಿರಿಯ ನಾಯಕ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ

ಬಿಜೆಪಿ ಹಿರಿಯ ನಾಯಕ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ

ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತ 5 ಅವಧಿಗೆ ಬಹು ನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ಕ್ಷೇತ್ರದ ಎಲ್ಲ ಜಾತಿ, ಧರ್ಮದ ಮತದಾರ ಬಾಂಧವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿಶ್ಚಯಿಸಿದ್ದೇನೆ. ವಿಧಾನಸಭಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ನಿಷ್ಠೆಯಿಂದ ಜವಾಬ್ದಾರಿ ನಿಭಾಯಿಸಿದ್ದೇನೆ. ಕುಂದಾಪುರ ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, ಎಲ್ಲ ವರ್ಗದ ಮತದಾರರಿಗೂ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟು, ನೋವು ಸಂಕಷ್ಟಗಳಿಗೆ ಸ್ಪಂದಿಸಿದ ಹಾಗೂ ಜನರ ಆಶೋತ್ತರಗಳನ್ನು ಈಡೇರಿಸಿದ ಸಂತೃಪ್ತಿ ಇದೆ ಎಂದು ಹೇಳಿದ್ದಾರೆ.

ಐದೂ ಚುನಾವಣೆಗಳಲ್ಲಿ ದಾಖಲೆ ಮತಗಳ ಅಂತರದಿಂದ ಚುನಾಯಿಸಿದ ಕ್ಷೇತ್ರದ ಮತದಾರರನ್ನು ವಿಶ್ವಾಸಕ್ಕೆ ಪಡೆದು, ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿ ಪ್ರೀತಿ ವಿಶ್ವಾಸ ಗಳಿಸಿದ ಹೆಮ್ಮೆ ಇದೆ. ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್‌, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ಚಿರ ಋಣಿಯಾಗಿರುತ್ತೇನೆ.

ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಪಕ್ಷದ ಪ್ರಮುಖರಿಗೆ, ಹಿರಿಯ ಕಿರಿಯ ಸ್ನೇಹಿತರಿಗೆ, ಅಧಿಕಾರಿಗಳಿಗೆ, ಮಾಧ್ಯಮದವರಿಗೆ ಹಾಗೂ ಕ್ಷೇತ್ರದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮತದಾರರು ನನ್ನ ಮೇಲಿಟ್ಟ ಪ್ರೀತಿ ಮತ್ತು ನಂಬಿಕೆಯೇ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದೆ. ಸಮಸ್ತ ಮತ ಬಾಂಧವರಿಗೂ ಕೃತಜ್ಞತೆ ಸಲ್ಲಿಸುತ್ತ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಬಿಜೆಪಿಯಿಂದ ಆಯ್ಕೆಯಾಗಲು ಅವಕಾಶ ಕೊಟ್ಟ ಪಕ್ಷಕ್ಕೂ ಹಾಗೂ ಪಕ್ಷೇತರನಾಗಿ ನಿಂತು ಗೆಲ್ಲಲು ಸಹಕರಿಸಿದವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಮತದಾರರು ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ವಾಜಪೇಯಿ ಎಂದೇ ಖ್ಯಾತರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, 1999ರಿಂದ ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!