ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ವೇಳೆ ಗಂಭೀರ ಭದ್ರತಾ ಲೋಪ ಉಂಟಾಗಿದೆ. ರವಿವಾರ ರಾತ್ರಿ ಅಮಿತ್ ಶಾ ಅವರು ಕೋರ್ ಕಮಿಟಿ ಸಭೆ ಮುಗಿಸಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಭದ್ರತಾ ಲೋಪವಾಗಿದೆ.
ರಾಜಭವನ ರಸ್ತೆಯಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಮಣಿಪಾಲ್ ಸೆಂಟರ್ ಎದುರು ಏಕಾಏಕಿ ಯುವಕರು ಬೈಕ್‌ನಲ್ಲಿ ಅಮಿತ್ ಶಾ ಸಂಚರಿಸುತ್ತಿದ್ದ ವಾಹನವನ್ನು ಹಿಂಬಾಲಿಸಿದ್ದಾರೆ. ಅಮಿತ್ ಶಾ ಸಂಚರಿಸುತ್ತಿದ್ದ ಕಾರ್ ಸಮೀಪ ಯುವಕರು ತಲುಪುತ್ತಿದ್ದಂತೆ ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ ತಡೆದಿದ್ದಾರೆ.
ಬೈಕ್ ನಲ್ಲಿದ್ದ ಇಬ್ಬರನ್ನು ಭಾರತೀನಗರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಇಬ್ಬರು ವಿದ್ಯಾರ್ಥಿಗಳು ಅನ್ನೋದು ಬಯಲಿಗೆ ಬಂದಿದೆ. ಯುವಕರು ಉದ್ದೇಶಪೂರ್ವಕವಾಗಿ ಬಂದಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದ್ದು, ತಡರಾತ್ರಿ ವರೆಗೂ ಯುವಕರನ್ನು ವಿಚಾರಣೆ ಮಾಡಿದ್ದಾರೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಿಸಲಾಗಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಯಲ್ಲಿ ರೋಡ್ ಶೋ ಮಾಡುವಾಗ ಯುವಕನೊಬ್ಬ ಏಕಾಏಕಿ ಪ್ರಧಾನಿ ಅವರ ಕಾರು ಬಳಿ ತೆರಳಲು ಓಡಿದ್ದನ್ನು ಇಲ್ಲಿ ಸ್ಮರಿಸಬಹುದು.