ಗೋವಿಂದರಾಜನಗರ ಕ್ಷೇತ್ರದಲ್ಲಿ ಶಾಸಕ ವಿ. ಸೋಮಣ್ಣ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರ ನಡುವೆ ನಡೆಯುತ್ತಿದ್ದ ಮುಸುಕಿನ ಯುದ್ಧ ಈಗ ಬಹಿರಂಗವಾಗಿಯೇ ಪ್ರದರ್ಶನಗೊಂಡಿದೆ. ಶುಕ್ರವಾರ ರಾತ್ರಿ ಬ್ಯಾನರ್ ಮತ್ತು ಬಂಟಿಂಗ್ಸ್ ಕಟ್ಟುವ ವಿಚಾರದ ನೆಪದಲ್ಲಿ ಶುರುವಾದ ಜಗಳ ಎರಡೂ ಗುಂಪುಗಳೂ ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವವರೆಗೂ ಸಾಗಿದೆ.
ಕ್ಷೇತ್ರದ ಬಾಲ ಗಂಗಾಧರ ಸ್ವಾಮೀಜಿ ಮೈದಾನದಲ್ಲಿ ಭಾನುವಾರ ಸ್ತ್ರೀಶಕ್ತಿ ಮಹಿಳಾ ಸಮಾವೇಶ ನಡೆಸಲು ಸೋಮಣ್ಣ ಬೆಂಬಲಿಗ ಉಮಾಶಂಕರ್ ಎಂಬಾತ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಮತ್ತೊಂದು ತಂಡ ಬ್ಯಾನರ್ ಕಟ್ಟುವ ವಿಚಾರಕ್ಕೆ ಮಾತಿನ ಚಕಮಕಿ ನಡೆಸಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಗುಂಪನ್ನು ಅಲ್ಲಿಂದ ಚದುರಿಸಿ ಕಳಿಸಿದ್ದಾರೆ.
ಆದರೆ ಮೈದಾನದಿಂದ ಹೊರಹೊರಟ ಬಳಿಕವೂ ಜಗಳ ಮುಂದುವರೆಸಿದ ಎರಡೂ ತಂಡಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿಕೊಂಡಿದೆ. ಮದ್ಯ ಪ್ರವೇಶಿಸಿದ ಪೊಲೀಸರಿಗೂ ಸಹ ಈ ವೇಳೆ ಸಣ್ಣಪುಟ್ಟ ಗಾಯಗಳಾಗಿವೆ. ಅನಿವಾರ್ಯವಾಗಿ ಲಾಠಿ ಚಾರ್ಜ್ ಗೆ ಪೊಲೀಸರು ಆದೇಶ ನೀಡಿದ್ದು ಎರಡೂ ಗುಂಪನ್ನು ಬಡಿದು ದೂರಕ್ಕೆ ಅಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಡಿಸಿಪಿ ಲಕ್ಷ್ಮಣ್ ನಿಂಬರಗಿ, ವಿಡಿಯೋ ಫೂಟೇಜ್ ಗಳನ್ನು ವೀಕ್ಷಿಸಿ ಬಳಿಕ ತಪ್ಪಿತಸ್ಥರ ಮೇಲೆ ಸುಮೊಟೋ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ