ಬೆಂಗಳೂರು: ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಮೇ 29ರಿಂದ ಆರಂಭಿಸುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.
2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮೇ 29ರಿಂದ ಅಕ್ಟೋಬರ್ 7ರ ವರೆಗೆ ಮೊದಲ ಅವಧಿಯ ತರಗತಿಗಳು ನಡೆಯಲಿವೆ. ಅಕ್ಟೋಬರ್ 8 ರಿಂದ 24ರ ವರೆಗೆ ದಸರಾ ರಜೆ ನೀಡಲಿದ್ದು, ಅಕ್ಟೋಬರ್ 25 ರಿಂದ 2024ರ ಏಪ್ರಿಲ್ 10ರ ವರೆಗೆ ಎರಡನೇ ಅವಧಿ ತರಗತಿಗಳು ನಡೆಯಲಿವೆ.
ಮೇ 31, 2023 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಬೇಕು. ಜೂನ್ 30ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. 244 ದಿನಗಳನ್ನು ಶಾಲಾ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದ್ದು, 180 ದಿನಗಳನ್ನು ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಮೀಸಲಿಡಲಾಗಿದೆ. 26 ದಿನ ಪರೀಕ್ಷಾ ಕಾರ್ಯಗಳಿಗೆ, 24 ದಿನ ಪಠ್ಯೇತರ ಚಟುವಟಿಕೆಗೆ, 10 ದಿನ ಮೌಲ್ಯಮಾಪನ ಪ್ರಕ್ರಿಯೆಗೆ ನಿಗದಿಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.