ಆಂಧ್ರಪ್ರದೇಶ: ಇಲ್ಲಿನ ಬುಡಕಟ್ಟು ಪ್ರದೇಶದ ಶಾಲೆಯೊಂದರಲ್ಲಿ ಕರ್ತವ್ಯದ ಗಡಿಯನ್ನು ಮೀರಿ ವಿದ್ಯಾರ್ಥಿಯೊಬ್ಬಳ ಪ್ರಾಣ ಉಳಿಸಲು ಶಿಕ್ಷಕಿ ಒಬ್ಬರು ತೋರಿರುವ ಅಪ್ರತಿಮ ಮಾನವೀಯತೆ ಸದ್ಯ ಎಲ್ಲೆಡೆ ಭಾರಿ ಮೆಚ್ಚುಗೆಗೆ (Viral Video) ಪಾತ್ರವಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಲುವಾಗಿ, ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಸೌಕರ್ಯವಿಲ್ಲದ ಕಾರಣ ಆಕೆ ಮಗುವನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ಕಠಿಣವಾದ ಗುಡ್ಡಗಾಡು ಮತ್ತು ಅರಣ್ಯದ ಹಾದಿಯಲ್ಲಿ ನಡೆದುಕೊಂಡು ಹೋಗಿದ್ದಾರೆ.
ವಿಡಿಯೋ ವೈರಲ್
ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ಶೈಲಜಾ ರಾಯಪತಿ ಅವರು ಈ ಹೃದಯಸ್ಪರ್ಶಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಶಾಲಾ ಶಿಕ್ಷಕಿಯನ್ನ ಶ್ರೀಮತಿ ಹೇಮಾನಿ ಎಂದು ಗುರುತಿಸಲಾಗಿದೆ. ಪಾರ್ವತಿಪುರಂ ಮಾನ್ಯಂನ ಗುಮ್ಮಲಕ್ಷ್ಮಿ ಪುರಂ ಬುಡಕಟ್ಟು ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 7 ನೇ ತರಗತಿಯ ವಿದ್ಯಾರ್ಥಿನಿ ಭುವನೇಶ್ವರಿ ಇದ್ದಕ್ಕಿದ್ದಂತೆ ತೀವ್ರ ಅತಿಯಾದ ಜ್ವರದಿಂದ ಸುಸ್ತಾಗಿದ್ದಳು, ಆ ಮಗುವನ್ನು ಬೆನ್ನ ಮೇಲೆ ಮಲಗಿಸಿಕೊಂಡು, ಹೇಮಾನಿ ಅವರು ಕಲ್ಲು-ಬಂಡೆಗಳಿಂದ ಕೂಡಿದ ಕಿರಿದಾದ ಕಣಿವೆ ಹಾಗೂ ಅರಣ್ಯದ ರಸ್ತೆಗಳಲ್ಲಿ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡುತ್ತಾ ಸಾಗುತ್ತಿರುವ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿದೆ. ಮಗುವಿನ ಚಿಕಿತ್ಸೆಯಲ್ಲಿ ಕಿಂಚಿತ್ತೂ ತಡವಾಗಬಾರದು ಎಂಬ ಒಂದೇ ಒಂದು ಉದ್ದೇಶದಿಂದ ಅವರು ಸರಿಸುಮಾರು 6 ಕಿಲೋಮೀಟರ್‌ಗಳಷ್ಟು ದೀರ್ಘ ಹಾದಿಯನ್ನು ಕಾಲಿನ ನಡಿಗೆಯ ಮೂಲಕವೇ ಸವೆಸಿದ್ದಾರೆ. ನಂತರ ಭುವನೇಶ್ವರಿಯನ್ನು ಪಾರ್ವತಿಪುರಂನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹೃದಯವಂತಿಕೆಯ ವಿಡಿಯೋವನ್ನು ಹಂಚಿಕೊಂಡಿರುವ ಮಹಿಳಾ ಆಯೋಗದ ಅಧ್ಯಕ್ಷರು, ಹೇಮಾ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಹೇಮಾನಿ ಅವರು ಕೇವಲ ಮಗುವಿನ ರಕ್ಷಣೆಯನ್ನಷ್ಟೇ ಮಾಡಿಲ್ಲ, ಬದಲಿಗೆ ನೈಜ ಜವಾಬ್ದಾರಿಗೆ ಕರುಣೆ ಮತ್ತು ಮಾನವೀಯತೆ ಜೊತೆಯಾದರೆ ಒಂದು ಜೀವವನ್ನು ಹೇಗೆ ಉಳಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕಠಿಣ ಪರಿಸರದಲ್ಲಿ ಸಾರ್ವಜನಿಕ ಸೇವೆ ಎಂದರೆ ಏನು ಎಂಬುದಕ್ಕೆ ಇವರೇ ನಿಜವಾದ ಉದಾಹರಣೆ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಧೀರ ಶಿಕ್ಷಕಿಗೆ ಸನ್ಮಾನ
ಹೇಮಾನಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಗುಮ್ಮಡಿ ಸಂಧ್ಯಾರಾಣಿ ಅವರು ಹೇಮಾನಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು ಮತ್ತು ಅವರ ಮಾನವೀಯ ಕಾರ್ಯಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಹೇಮಾನಿ ಅವರ ಈ ಧೀರ ಮತ್ತು ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆಯಾದರೂ, ಈ ಘಟನೆಯು ಬುಡಕಟ್ಟು ಮತ್ತು ಗ್ರಾಮೀಣ ಭಾಗದ ಶಾಲೆಗಳಲ್ಲಿರುವ ಮೂಲಸೌಕರ್ಯಗಳ ಕೊರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ತುರ್ತು ಸಂದರ್ಭಗಳಲ್ಲಿ ಕನಿಷ್ಠ ವಾಹನ ಸೌಕರ್ಯ ಅಥವಾ ರಸ್ತೆ ಸಂಪರ್ಕ ಇಲ್ಲದಿರುವ ಕಾರಣ ಇಂತಹ ಪ್ರದೇಶಗಳ ಜನರು ಇಂದಿಗೂ ಪರದಾಡುವಂತಾಗಿದೆ. ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕೇವಲ ವೈಯಕ್ತಿಕ ಸಾಹಸಗಳನ್ನು ನಂಬಿಕೊಳ್ಳದೆ, ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಬಲವಾದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಚರ್ಚೆಗಳಿಗೂ ಈ ಘಟನೆ ಈಗ ಮುನ್ನುಡಿ ಬರೆದಿದೆ.