ಮೌಢ್ಯ ವಿರೋಧಿ ಕ್ರಮವಾಗಿ ಕಳೆದ ಬಾರಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಬಾರಿ ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುವುದಾಗಿ ಹೇಳಿದ್ದಾರೆ.
ಅಲ್ಲದೆ, ಈ ಬಾರಿ ನಾಮಪತ್ರ ಸಲ್ಲಿಕೆ ಮಾಡುವ ದಿನ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸುತ್ತೇವೆ. ಏಪ್ರಿಲ್ 11 ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ ದಿನವಾಗಿದೆ. ದಿನವೂ ರಾಹುಕಾಲ ಇರುತ್ತೆ, ಆ ಸಮಯದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ರಾಹುಕಾಲ, ಒಳ್ಳೆಯ ಕಾಲ ಎನ್ನುವುದು ನಮ್ಮ ಭ್ರಮೆ ಅಷ್ಟೇ ಎಂದು ಅವರು ಹೇಳಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಎಂದೇ ಹೊಸ ವಾಹನ ತಂದಿದ್ದೇವೆ. ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ. ಎರಡ್ಮೂರು ದಿನಗಳಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸಂಪ್ರದಾಯ ವಿರೋಧಿ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದಾಗ, “ಈ ಆಚರಣೆ ಕೆಟ್ಟಿದ್ದು ಎಂದು ಹೇಳುವವರು ಯಾರು? ಅದು ನಮ್ಮ ವಿಚಾರ. ಮೂವತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಈ ದಾರಿ ತೋರಿಸಿದ್ದೇ ಬಸವಣ್ಣ, ಬುದ್ಧ ಮತ್ತು ಅಂಬೇಡ್ಕರ್” ಎಂದು ಜಾರಕಿಹೊಳಿ ಹೇಳಿದ್ದಾರೆ.
2018 ರ ವಿಧಾನಸಭಾ ಚುನಾವಣೆಯಲ್ಲೂ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಸತೀಶ್ ಜಾರಕಿಹೊಳಿ, ತಾನು ಗೆದ್ದೇ ಗೆಲ್ಲುವೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಅದರಂತೆ 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.