Thursday, July 16, 2026
Homeಟಾಪ್ ನ್ಯೂಸ್TOXIC: ಜಾಗತಿಕ ಮಾಧ್ಯಮಗಳನ್ನು ಬೆಂಗಳೂರಿಗೆ ಸೆಳೆಯಲು ‘ಟಾಕ್ಸಿಕ್’ ಟೀಂ ಮಾಸ್ಟರ್ ಪ್ಲಾನ್, ಬಿಗ್ ಈವೆಂಟ್ ನಿಗದಿ!

TOXIC: ಜಾಗತಿಕ ಮಾಧ್ಯಮಗಳನ್ನು ಬೆಂಗಳೂರಿಗೆ ಸೆಳೆಯಲು ‘ಟಾಕ್ಸಿಕ್’ ಟೀಂ ಮಾಸ್ಟರ್ ಪ್ಲಾನ್, ಬಿಗ್ ಈವೆಂಟ್ ನಿಗದಿ!

ಬೆಂಗಳೂರು: ಕನ್ನಡ ಚಿತ್ರರಂಗದ (Sandalwood) ಇತಿಹಾಸದಲ್ಲೇ ಅಭೂತಪೂರ್ವ ನಿರೀಕ್ಷೆ ಹಾಗೂ ಭಾರಿ ಬಜೆಟ್‌ನೊಂದಿಗೆ ಸಿದ್ಧವಾಗುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ (Toxic)   ಟಾಕ್ಸಿಕ್. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ವರ್ಲ್ಡ್ ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಪ್ರೇಕ್ಷಕರಲ್ಲಿ ಕುತೂಹಲವನ್ನು ದಿನೇ ದಿನೆ ಹೆಚ್ಚಿಸುತ್ತಿದೆ. ಸದ್ಯ ಚಿತ್ರತಂಡವು ಸಿನಿಮಾದ ಪ್ರಚಾರಕ್ಕಾಗಿ ಅತ್ಯಂತ ಬೃಹತ್ ಯೋಜನೆಯೊಂದನ್ನು ರೂಪಿಸುತ್ತಿದ್ದು, ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ ಹೈ-ಪ್ರೊಫೈಲ್ ಕಾರ್ಯಕ್ರಮವೊಂದನ್ನು ಆಯೋಜಿಸಲು ಸಜ್ಜಾಗಿದೆ.

ಬೆಂಗಳೂರಿಗೆ ಬರಲಿದ್ದಾರೆ ದೇಶ-ವಿದೇಶಗಳ ಪತ್ರಕರ್ತರರು
ಮುಖ್ಯವಾಗಿ ಟಾಕ್ಸಿಕ್, ಸಿನಿಮಾ ಬಿಡುಗಡೆಗೆ ಕೇವಲ 11 ದಿನಗಳು ಬಾಕಿ ಇರುವಾಗ ಈ ಅದ್ಧೂರಿ ಈವೆಂಟ್ ನಡೆಯಲಿದೆ. ‘ಟಾಕ್ಸಿಕ್’ ಸಿನಿಮಾ ಕೇವಲ ಭಾರತೀಯ ಭಾಷೆಗಳಲ್ಲದೆ, ಇಂಗ್ಲಿಷ್‌ನಲ್ಲೂ ಜಾಗತಿಕ ಮಟ್ಟದಲ್ಲಿ ತೆರೆಕಾಣುತ್ತಿರುವುದರಿಂದ, ಪ್ರಚಾರ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಮಟ್ಟದಲ್ಲೇ ಆಯೋಜಿಸಲಾಗುತ್ತಿದೆ. ಈ ಹೈ-ಪ್ರೊಫೈಲ್ ಕಾರ್ಯಕ್ರಮಕ್ಕಾಗಿ ಭಾರತದ ಮೂಲೆ ಮೂಲೆಗಳ ಮಾಧ್ಯಮ ಪ್ರತಿನಿಧಿಗಳು ಮಾತ್ರವಲ್ಲದೆ, ವಿದೇಶಿ ಪತ್ರಕರ್ತರು ಕೂಡ ಬೆಂಗಳೂರಿಗೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಇದೆ.

ನುಡಿದಂತೆ ನಡೆದ ರಾಕಿಂಗ್ ಸ್ಟಾರ್ ಯಶ್
“ನಾನು ಬೇರೆ ಚಿತ್ರರಂಗಕ್ಕೆ ಹೋಗಲ್ಲ, ಬದಲಿಗೆ ಅವರನ್ನೇ ನಮ್ಮತ್ತ ತಿರುಗಿ ನೋಡುವಂತೆ ಮಾಡುತ್ತೇನೆ” ಎಂದು ಈ ಹಿಂದೆ ಯಶ್ ಹೇಳಿದ್ದ ಮಾತುಗಳು ಈಗ ಅಕ್ಷರಶಃ ನಿಜವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳ ಪ್ರಚಾರಕ್ಕಾಗಿ ಚಿತ್ರತಂಡಗಳು ಮುಂಬೈ, ಹೈದರಾಬಾದ್ ಅಥವಾ ವಿದೇಶಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಯಶ್ ಈ ಟ್ರೆಂಡ್ ಬದಿಗೆ ಸರಿಸಿ, ಜಾಗತಿಕ ಮಾಧ್ಯಮಗಳನ್ನೇ ಬೆಂಗಳೂರಿಗೆ ಕರೆಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

‘ಕೆಜಿಎಫ್’ ಸರಣಿಯ ಪ್ರಚಂಡ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಚಿತ್ರ ಇದಾಗಿರುವುದರಿಂದ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಮಾಫಿಯಾ ಮತ್ತು ಆಕ್ಷನ್ ಕಥೆ ಹೊಂದಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಹಾಗೂ ಕಿಯಾರಾ ಅಡ್ವಾಣಿ ಸೇರಿದಂತೆ ದಕ್ಷಿಣ ಮತ್ತು ಬಾಲಿವುಡ್‌ನ ಪ್ರಮುಖ ತಾರೆಯರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ಈ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

ಇದನ್ನೂ ಓದಿ: ವಿಜಯ್ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದು ಸುಳ್ಳಾ? ‘ಜನನಾಯಗನ್’ ಬಿಡುಗಡೆ ತಡವಾಗಲು ಅಸಲಿ ಕಾರಣ ರಿವೀಲ್!

ಹೆಚ್ಚಿನ ಸುದ್ದಿ

Change Language »
error: Content is protected !!