Sunday, January 25, 2026
Homeಟಾಪ್ ನ್ಯೂಸ್SANDALWOOD: 2020-2021ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

SANDALWOOD: 2020-2021ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರವು ಚಲನಚಿತ್ರ (State Film Award) ರಂಗದಲ್ಲಿನ (sandalwood) ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2020 ಹಾಗೂ 2021ನೇ ಕ್ಯಾಲೆಂಡರ್ ವರ್ಷಗಳ ಪ್ರಶಸ್ತಿಗಳು ಇವುಗಳಾಗಿವೆ.

ಹಿರಿಯ ನಟಿ ಡಾ.ಜಯಮಾಲಾ, ಸಾ.ರಾ.ಗೋವಿಂದು ಅವರಿಗೆ ಡಾ. ರಾಜ್‍ಪ್ರಶಸ್ತಿ, ಎಂ.ಎಸ್.ಸತ್ಯು, ಕೆ.ಶಿವರುದ್ರಯ್ಯ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಹಿರಿಯ ಸಿನಿಮಾ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ, ಎಂ.ಕೆ.ಸುಂದರರಾಜ್ ಅವರು ಡಾ.ವಿಷ್ಣುವರ್ಧನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2020 ಹಾಗೂ 2021ರ ಜೀವಮಾನ ಸಾಧನೆ ಪ್ರಶಸ್ತಿಗಳ ಆಯ್ಕೆಗೆ ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ, ಹಿರಿಯ ಸಿನೆಮಾಟೋಗ್ರಾಫರ್ ಬಿ.ಎಸ್.ಬಸವರಾಜ, ಹಿರಿಯ ಪತ್ರಕರ್ತ ರಘುನಾಥ ಚ.ಹ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಹಾಗೂ ವಾರ್ತಾ ಇಲಾಖೆಯ ಆಯುಕ್ತರು ಸದಸ್ಯರಾಗಿದ್ದರು, ಸಮಿತಿಯು ವಿಸ್ತೃತವಾಗಿ ಚರ್ಚಿಸಿದ ಬಳಿಕ ಸರ್ಕಾರಕ್ಕೆ ಕಳುಹಿಸಿದ್ದ ಸಲಹೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನುಮೋದನೆ ನೀಡಿದ ಬಳಿಕ ಸರ್ಕಾರದ ಆದೇಶ ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ ತಲಾ 5 ಲಕ್ಷ ರೂ.ಗಳ ನಗದು ಪುರಸ್ಕಾರ ಒಳಗೊಂಡಿದೆ.

ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರ ಪರಿಚಯ:

ಡಾ.ಜಯಮಾಲಾ (2020 – ಡಾ.ರಾಜಕುಮಾರ್ ಪ್ರಶಸ್ತಿ):
ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟಿಗಳಲ್ಲಿ ಡಾ.ಜಯಮಾಲಾ ಪ್ರಮುಖರು. 1959ರ ಫೆಬ್ರವರಿ 28ರಂದು ಪಣಂಬೂರಿನಲ್ಲಿ ಜನಿಸಿದ ಅವರು, ನಾಟಕಗಳ ಮೂಲಕ ಕಲಾ ಬದುಕು ಆರಂಭಿಸಿದರು. ತುಳು ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ‘ಬೂತಯ್ಯನ ಮಗ ಅಯ್ಯು’ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಡಾ.ರಾಜಕುಮಾರ್ ಅಭಿನಯದ ‘ಪ್ರೇಮದ ಕಾಣಿಕೆ’ ಚಿತ್ರ ಅವರ ವೃತ್ತಿಗೆ ಮಹತ್ವದ ತಿರುವು ನೀಡಿತು. 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಜಯಮಾಲಾ, ‘ತಾಯಿ ಸಾಹೇಬ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಪಡೆದರು. ನಟನೆಯ ಜೊತೆಗೆ ನಿರ್ಮಾಪಕಿ, ಸಚಿವೆಯಾಗಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಎ ಹಾಗೂ ಪಿಎಚ್.ಡಿ ಪದವೀಧರೆಯಾಗಿರುವ ಅವರು ಬಹುಮುಖ ಸಾಧಕಿ.

ಸಾ.ರಾ.ಗೋವಿಂದು (2021 – ಡಾ.ರಾಜಕುಮಾರ್ ಪ್ರಶಸ್ತಿ):
1953ರಲ್ಲಿ ಸಾಲಿಗ್ರಾಮದಲ್ಲಿ ಜನಿಸಿದ ಸಾ.ರಾ.ಗೋವಿಂದು, ಡಾ.ರಾಜಕುಮಾರ್ ಅವರ ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರರಂಗ ಪ್ರವೇಶಿಸಿದರು. ಡಾ.ರಾಜ್ ಅಭಿಮಾನಿ ಸಂಘಟನೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅವರು, ಸುಮಾರು 16 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎರಡು ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಎಂ.ಎಸ್.ಸತ್ಯು (2020 – ಪುಟ್ಟಣ್ಣ ಕಣಗಾಲ್ ಪ್ರಶಸ್ತಿ):
ಖ್ಯಾತ ನಿರ್ದೇಶಕ, ಚಿತ್ರಕಥಾ ಬರಹಗಾರ ಹಾಗೂ ರಂಗಭೂಮಿ ಕಾರ್ಯಕರ್ತರಾದ ಎಂ.ಎಸ್.ಸತ್ಯು ಸಾಮಾಜಿಕ ನ್ಯಾಯ ಆಧಾರಿತ ಚಿತ್ರಗಳಿಗೆ ಹೆಸರಾದವರು. ‘ಗರಂ ಹವಾ’ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಅವರು, ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

ಶಿವರುದ್ರಯ್ಯ ಕೆ. (2021 – ಪುಟ್ಟಣ್ಣ ಕಣಗಾಲ್ ಪ್ರಶಸ್ತಿ):
ನಿರ್ದೇಶಕ ಹಾಗೂ ಬರಹಗಾರರಾದ ಶಿವರುದ್ರಯ್ಯ, ಸಾಹಿತ್ಯಾಧಾರಿತ ಚಲನಚಿತ್ರಗಳ ಮೂಲಕ ಗುರುತಿಸಿಕೊಂಡವರು. ಸುಮಾರು 11 ಚಿತ್ರಗಳನ್ನು ನಿರ್ದೇಶಿಸಿದ್ದು, ರಂಗಭೂಮಿ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ.

ಪ್ರಗತಿ ಅಶ್ವತ್ಥನಾರಾಯಣ (2020 – ಡಾ.ವಿಷ್ಣುವರ್ಧನ್ ಪ್ರಶಸ್ತಿ):
ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಅಶ್ವತ್ಥನಾರಾಯಣ, ಸುಮಾರು 300 ಚಿತ್ರಗಳಿಗೆ ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ. ಅವರ ಅಪಾರ ಸಂಗ್ರಹ ಚಿತ್ರರಂಗದ ಇತಿಹಾಸವಾಗಿದೆ.

ಎಂ.ಕೆ.ಸುಂದರರಾಜ್ (2021 – ಡಾ.ವಿಷ್ಣುವರ್ಧನ್ ಪ್ರಶಸ್ತಿ):
ಹಿರಿಯ ನಟ ಎಂ.ಕೆ.ಸುಂದರರಾಜ್, ಕನ್ನಡ ಸೇರಿದಂತೆ ಹಲವು ಭಾಷೆಗಳ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದು, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ಇದನ್ನೂ ಓದಿ:  ಹೈಕಮಾಂಡ್ ಆಶೀರ್ವಾದ, ಶಾಸಕರ ಬೆಂಬಲದಿಂದ 2ನೇ ಬಾರಿ ಸಿಎಂ ಆಗಿರುವೆ: ಸಿದ್ದರಾಮಯ್ಯ

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!