ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಡಿಂಪಲ್ ಕ್ವೀನ್’ ರಚಿತಾ ರಾಮ್ (Rachita Ram) ಅವರು ಇದೀಗ ಸಂಚಾರ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್‌ನ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿರುವ ಇವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ವಿಡಿಯೋ?
ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ರಚಿತಾ ರಾಮ್ ಅವರು ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಬೈಕ್ ಚಲಾಯಿಸುತ್ತಿರುವ ಯುವತಿ ಹಾಗೂ ಹಿಂಬದಿಯಲ್ಲಿರುವ ರಚಿತಾ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಇನ್ನು ಬೈಕ್ ಚಲಾಯಿಸುತ್ತಿರುವ ಯುವತಿ ಅಪ್ರಾಪ್ತ ವಯಸ್ಕಳಂತೆ ಕಾಣುತ್ತಿದ್ದು, ಆಕೆಗೆ ವಾಹನ ಚಾಲನಾ ಪರವಾನಗಿ (ಲೈಸೆನ್ಸ್) ಇದೆಯೇ ಎಂಬ ಬಗ್ಗೆಯೂ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಹೆಲ್ಮೆಟ್ ಧರಿಸದೇ ಬುಲೆಟ್ ಸವಾರಿ, ನಟಿ ರಚಿತಾ ರಾಮ್ ವಿರುದ್ಧ ಜನ ಕಿಡಿ!#rachitaram #nohelmet #bikeride #sandalwood #Bengaluru #Kannadanews #navasamajanews pic.twitter.com/BpZhuSKmH5
— navasamaja (@navasamajanews) April 13, 2026
ನಟಿಗೆ ದಂಡ ವಿಧಿಸ್ತಾರಾ ಪೊಲೀಸರು?
ಬೆಂಗಳೂರು ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನದ ಇಬ್ಬರೂ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಇಲ್ಲದಿದ್ದರೆ ಕನಿಷ್ಠ 500 ರೂಪಾಯಿ ದಂಡ ವಿಧಿಸಲಾಗುತ್ತದೆ. “ಸೆಲೆಬ್ರಿಟಿಗಳನ್ನು ಸಾವಿರಾರು ಜನರು ಮಾದರಿಯಾಗಿ ನೋಡುತ್ತಾರೆ. ಅಂತಹವರೇ ಹೀಗೆ ಬಹಿರಂಗವಾಗಿ ನಿಯಮಗಳನ್ನು ಗಾಳಿಗೆ ತೂರಿದರೆ ಜನಸಾಮಾನ್ಯರಿಗೆ ಯಾವ ಸಂದೇಶ ಹೋಗುತ್ತದೆ?” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋ ಯಾವುದಾದರೂ ಸಿನಿಮಾದ ಚಿತ್ರೀಕರಣದ ಭಾಗವೇ ಅಥವಾ ಅವರ ವೈಯಕ್ತಿಕ ಸಂಚಾರವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ರಚಿತಾ ರಾಮ್ ಅವರು ಈವರೆಗೂ ಈ ವಿವಾದದ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಸಂಚಾರ ಪೊಲೀಸರು ಈ ವೈರಲ್ ವಿಡಿಯೋ ಆಧರಿಸಿ ದಂಡ ವಿಧಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ್ರಾ ನಟಿ ರಚಿತಾ ರಾಮ್ ಬೌನ್ಸರ್?