ಬೆಂಗಳೂರು: ಸ್ಯಾಂಡಲ್‌ವುಡ್ (Sandalwood) ತಾರೆಯರು ಪಾಪರಾಜಿಗಳ (Photographers) ವಿರುದ್ಧ ಇದೀಗ ಹೊಸ ಅಭಿಯಾನವೊಂದನ್ನು (Campaign) ಶುರುಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸಿನಿಮಾ ತಾರೆಗಳು ತಮಗೆ ಆಗುತ್ತಿರುವ ತೊಂದರೆಯನ್ನು ಹೊರಹಾಕುತ್ತಿದ್ದಾರೆ.
ರಕ್ಷಿತಾ ಪ್ರೇಮ್ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಸಪ್ತಮಿ ಗೌಡ, ಮೋಹಕ ತಾರೆ ರಮ್ಯಾ, ನಟ ಯುವರಾಜ್‌ಕುಮಾರ್ ಸೇರಿದಂತೆ ಅನೇಕರು ಸಾಥ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿ ಹಾಗೂ ಕಾರ್ಯಕ್ರಮಗಳಲ್ಲಿ ನಟಿಯರ ಅಂಗಾಂಗ ಫೋಕಸ್ ಮಾಡಿ, ರೀಲ್ಸ್, ಮೀಮ್ಸ್, ಶಾರ್ಟ್‌ಗಳನ್ನು ಹಾಕುವ ಡಿಜಿಟಲ್ ಛಾಯಾಗ್ರಾಹಕರಿಗೆ ನಟಿಯರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಇದನ್ನು ನಿಲ್ಲಿಸದಿದ್ದರೆ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ತಾರೆಯರ ಖಾಸಗಿ ಸಮಯದಲ್ಲೂ ಮೊಬೈಲ್ ಕ್ಯಾಮೆರಾಗಳನ್ನ ಹಿಡಿಯುವುದನ್ನ ನಿಲ್ಲಿಸಲು ರಕ್ಷಿತಾ ಹಾಗೂ ಸಪ್ತಮಿ ಕರೆ ಕೊಟ್ಟಿದ್ದು, ಇದರಿಂದ ಯಾತನೆ ಅನುಭವಿಸಿರುವ ಕಲಾವಿದರೆಲ್ಲರೂ ಸಾಥ್ ಕೊಟ್ಟಿದ್ದಾರೆ.
#ActorsNotObjects ಎಂಬ ಹ್ಯಾಶ್‌ಟ್ಯಾಗ್ ಮೂಲಕ ಆಂದೋಲಕ್ಕೆ ಚಾಲನೆ ಸಿಕ್ಕಿದ್ದು, ನಟಿಯರು ಪಾಪರಾಜಿಗಳ ಸಂಸ್ಕೃತಿ ವಿರುದ್ಧ ಧ್ವನಿ ಎತ್ತಿದ್ದಾರೆ. ಬಾಲಿವುಡ್‌ನಿಂದ ಬಂದ ಪಾಪರಾಜಿ ಸಂಸ್ಕೃತಿ ಸ್ಯಾಂಡಲ್‌ವುಡ್‌ನಲ್ಲಿ ಸಲ್ಲದು ಅನ್ನೋದೇ ಹೊಸ ಅಭಿಯಾನದ ಉದ್ದೇಶ. ಸದ್ಯಕ್ಕೀಗ ಒಬ್ಬಬ್ಬರಾಗೇ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ವೀವ್ಸ್, ಲೈಕ್ಸ್ ಸಲುವಾಗಿ ತಮ್ಮನ್ನು ಅಸಭ್ಯವಾಗಿ ತೋರಿಸುವ ಸಂಸ್ಕೃತಿ ಸರಿ ಇಲ್ಲ ಅನ್ನುವುದು ಈ ಅಭಿಯಾನದ ಉದ್ದೇಶ. ಇತ್ತೀಚೆಗೆ ಥಿಯೇಟರ್‌ನಲ್ಲಿ ನಟಿ ಸಪ್ತಮಿ ಗೌಡ ಥಿಯೇಟರ್‌ನಲ್ಲಿ ಪೂಜೆ ಮಾಡ್ತಿದ್ದ ವೇಳೆ ಮೊಬೈಲ್ ಕ್ಯಾಮೆರಾಗಳು ಚಿತ್ರೀಕರಿಸಿದ್ದ ರೀತಿ ಸರಿ ಇಲ್ಲ. ಹೀಗಾಗಿ ಪಾಪರಾಜಿಗಳ ಆಟಾಟೋಪಕ್ಕೆ ಬ್ರೇಕ್ ಹಾಕಬೇಕು ಎಂದು ಸಪ್ತಮಿ ಗೌಡ ಹೇಳಿದ್ದಾರೆ.
ಇದನ್ನೂ ಓದಿ : ಮದುವೆಯ ಸಂಭ್ರಮದಲ್ಲಿ ಸಮಾಜಸೇವೆ, ಬಡ ವಿದ್ಯಾರ್ಥಿಗಳಿಗೆ ನೆರವಾದ ವಿಜಯ್–ರಶ್ಮಿಕಾ ಜೋಡಿ
ಸಪ್ತಮಿ ಗೌಡ ಹೇಳಿದ್ದೇನು..?: ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಈ ಕುರಿತು ಬರೆದುಕೊಂಡಿರುವ ಸಪ್ತಮಿ ಗೌಡ, ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಯಿಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃಪುನಃ ನಡೆಯುತ್ತಿವೆ.
ಇಂತಹವರ್ತನೆ, ಕೆಲವರಿಂದ ನಡೆಯುತ್ತಿರುವುದಾದರೂ, ಅದು ಅಸಭ್ಯ, ಅವಮಾನಕಾರಿ ಮತ್ತು ಸೆಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ.
ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನೆಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ. ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವುನಿರೀಕ್ಷಿಸುತ್ತೇವೆ.
ಈ ಗಡಿ ರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ.ಗೌರವವನ್ನು ಬೇಡುವನಮ್ಮಧ್ವನಿ ಮುಂದುವರೆಯುತ್ತದೆ.
